ಒಂದು ದಿನ.. ಎರಡು ಚಿತ್ರ.. “ಜಂಗ್ಲಿ” “ಸಂಕಟ”..!

    ಹೋದ ರವಿವಾರ ನಮ್ಮ ಹಳೆಯ ದಾಖಲೆ ಮುರಿಯುವ ಪ್ರಯತ್ನ ಮಾಡಿದೆವು! ವಿಫಲರಾದೆವು! ಹಳೆಯ ದಾಖಲೆ: ಒಂದು ದಿನದಲ್ಲಿ ಎರಡು ಸಿನಿಮಾ… (ಮನೆಯಲ್ಲಿ ಅಲ್ಲ, ಚಿತ್ರಮಂದಿರದಲ್ಲಿ) “ವೆಂಕಟ ಇನ್ ಸಂಕಟ”ಕ್ಕೆ ನಾನು, “ಜಂಗ್ಲಿ”ಗೆ ಮಿತ್ರ… ಯಾವುದು ನೋಡುವುದು, ಈಗೀಗ ಭೇಟಿಯೇ ಅಪರೂಪ. ಕಾಲೇಜು ದಿನಗಳಲ್ಲಿ ವಾರಕ್ಕೊಂದು ಸಿನಿಮಾ, ಇಲ್ದಿದ್ರೆ, ತಿಂಗಳಿಗೆ ಮೂರಾದರೂ ಇರ್ತಿತ್ತು. ಆ ದಿನಗಳು ಈಗೆಲ್ಲಿ ಬಿಡಿ. ಎಂತೆಂಥಾ ಡಬ್ಬಾ ಚಿತ್ರಗಳ ನೋಡಲೂ ಆಗ ಸಮಯ. ಈಗ ಒಳ್ಳೆಯ ಚಿತ್ರವಿದೆಯೆಂದರೆ, ನೋಡ್ತೀವೋ ಇಲ್ವೋ ಗೊತ್ತಿಲ್ಲ. (ಟೀವಿಯಲ್ಲಿ ನೋಡೋದು ಬೇರೆ ವಿಷಯ. ಇಲ್ಲಿ ಹೇಳ್ತಿರುವುದು ಚಿತ್ರಮಂದಿರದಲ್ಲಿ ಚಲನಚಿತ್ರ ನೋಡೊ ಸಂಗತಿ!)
    ನೀವೇನೇ ಹೇಳಿ, ಚಿತ್ರಮಂದಿರದಲ್ಲಿ ಸಿನಿಮಾ ನೋಡೋ ಮಜಾ ಟೀವಿಯಲ್ಲಿ ಇಲ್ಲ. ಆ ದೊಡ್ಡ ಸಿನಿಮಾಸ್ಕೋಪ್ ಪರದೆಗೂ, ಈ ಚಿಕ್ಕ ಸೀ.ಆರ್.ಟೀ ಮಾನಿಟರ್ ಗೂ ಎಲ್ಲಿಯ ತುಲನೆ? (ಎಲ್.ಸಿ.ಡಿ ಆದ್ರೂ ಅಷ್ಟೇ..) ಸುತ್ತುವರಿ ಧ್ವನಿ ವಿಶೇಷಗಳು (surround sound effects) ಇಲ್ಲದೇ ಮಜಾ ಇಲ್ಲ. ಕಾಲೇಜು ದಿನಗಳಲ್ಲಿ, ಗೋವಿಂದನ “ವಾಹ್.. ತೆರಾ ಕ್ಯಾ ಕೆಹ್ನಾ” ಸುಚಿತ್ರಾ ಚಿತ್ರಮಂದಿರದಲ್ಲಿ ನೋಡಿ ತಲೆ ಕೆಟ್ಟು ಹೋಯ್ತು ನಮಗೆ. (ಅಷ್ಟು ಡಬ್ಬಾ ಚಿತ್ರ ಅದು). ಅಲ್ಲಿಂದ ನಮ್ಮ ಸವಾರಿ ಸೀದಾ ಅಜಯ್ ದೇವಗನ್-ಅಕ್ಷಯ ಖನ್ನಾ “ದೀವಾನ್ಗೀ” ಇರೋ ಸೆಂಟ್ರಲ್ ಗೆ ಹೋಗಿತ್ತು… ಬಿಡಿ, ಹಳೇ ವಿಷಯ…

ವೆಂಕಟ ಇನ್ ಸಂಕಟ

ವೆಂಕಟ ಇನ್ ಸಂಕಟ

   ಅಂದ ಹಾಗೆ, ಹೋದ ರವಿವಾರ, ಹೊರಟೆವು, “ವೆಂಕಟ”ನ ನೊಡಲು. “ಸಂಕಟ” ಪಡಲು! ಚೆನ್ನಾಗಿರುವ ಹಾಸ್ಯ ಚಿತ್ರವೆಂದು, ಡಬ್ಬಾ ಕ್ಲೈಮಾಕ್ಸ್ ಎಂದೂ ಇದ್ದ ವಿಶ್ಲೇಷಣೆ ಓದಿದ್ದೆ. ವಿಶ್ಲೇಷಕನ್ನ ಹಿಡಿದು ಒದೆಯಬೇಕೆಂದೆನಿಸಿತು, “ಸಂಕಟ”ಪಟ್ಟ ಮೇಲೆ. ಅಂತೂ ಡಬ್ಬಾ ಕ್ಲೈಮಾಕ್ಸ್ ಅನ್ನೋ ಸತ್ಯ ಹೇಳಿದ್ನಲ್ಲಾ, ಬಿಡಿ… ಅಭಿನಯದಲ್ಲೇನೂ ಕಡಿಮೆಯಿಲ್ಲ. ರಮೇಶ್, ಉಮಾಶ್ರೀ, ಮು.ಮ ಚಂದ್ರು, ಕರಿಬಸವಯ್ಯ….. ಅಭಿನಯವೆಲ್ಲಾ ಚೆನ್ನಾಗಿತ್ತು, ಉಮೇಶ್ ಅವರ ಅಜ್ಜಿ ಪಾತ್ರ ನಿಜಕ್ಕೂ ಸೂಪರ್! ಆದರೆ, ಹೆಚ್ಚಿನದು ಮೊದಲು ಕೇಳಿದ್ದ/ನೋಡಿದ್ದ ಹಾಸ್ಯವೇ ಆಪರೇಶನ್ ಮಾಡಿಸಿಕೊಂಡು ಹೊಸ ರೂಪ ತಾಳಿ ಬಂದಾಗ ಕಿರಿಕಿರಿಯಾಯಿತು. ಮೋಟಾರ್ ಬೈಕು ವೇಗವರ್ಧಕ (accelerator) ಇಲ್ಲದೇ ಹೇಗೆ ಓಡ್ತಾ ಇತ್ತು ಎಂದು ನಮಗೆ ಇನ್ನೂ ಯಕ್ಷಪ್ರಶ್ನೆಯಾಗೇ ಉಳಿದಿದೆ! ಏನೇ ಆದರೂ, ರಮೇಶ್ ಅವರ ಪ್ರಯತ್ನವನ್ನು ಅಲ್ಲಗೆಳೆಯುವಂತಿಲ್ಲ. ಸ್ವಲ್ಪ ಹಾಸ್ಯದ ಹಾಗೂ ಕ್ಲೈಮಾಕ್ಸ್ ಕಡೆಗೆ ಹೆಚ್ಚು ಧ್ಯಾನ ವಹಿಸಿದ್ದರೆ, ಚಿತ್ರ ಇನ್ನೂ ಚೆನ್ನಾಗಿ ಮೂಡಿ ಬರುತ್ತಿತ್ತು. ಕ್ಲಾಸ್ನಲ್ಲಿ ಕಾಪಿ ಹೊಡೆಯೋ ದೃಶ್ಯ ಮಾತ್ರ ನಮ್ಮನ್ನು ತುಂಬಾ ನಗಿಸಿತ್ತು! ಸಂಭಾಷಣೆಗಳೂ ಚೆನ್ನಾಗಿದ್ದವು. ಆದರೆ, ಹೊಗಳಲಾರ್ಹ ವಿಷಯವೇನೆಂದರೆ, ರಮೇಶ್ ಅವರು ತುಂಬಾ ನವ ಪ್ರತಿಭೆಗಳನ್ನು ಈ ಚಿತದ ಮೂಲಕ ತೆರೆಗೆ ತಂದಿದ್ದು. ಪಲ್ಟಿ ಹೊಡೆಯೋ ಅವಳಿ ಹುಡುಗರು, ಹಾಗೂ ನಾವು ಚಿತ್ರ ಈ ಚಿತ್ರ ನೋಡಲು ಮುಖ್ಯ ಕಾರಣ… ದೇವದಾಸ್ ಕಾಪಿಕಾಡ್! ಟೈಟಲ್ನಲ್ಲಿ ಇವರನ್ನು ಹೊಸಾ ಪ್ರತಿಭೆಯೆಂದು ತೋರಿಸಿದ್ದರೂ, ಇವರು ನಮಗೆ ಹೊಸಾ ಪ್ರತಿಭೆಯೇನೂ ಅಲ್ಲ. ಉಡುಪಿ-ಮಂಗಳೂರಲ್ಲಿ ಯಾರ ಬೇಕಾದರೂ ಕೇಳಿ, “ಭಲೇ ಚಾ ಪರ್ಕ”ದ ಕಾಪಿಕಾಡರು ಯಾರೆಂದು ಹೇಳುತ್ತಾರೆ. ತುಳು ನಾಟಕದ ದೊಡ್ಡ ಹೆಸರು, “ದೇವದಾಸ್ ಕಾಪಿಕಾಡ್”! ಇವರು ನಟಿಸಿರುವ ಮೊದಲ ಕನ್ನಡ ಚಿತ್ರ ನೋಡಲೆಂದೇ ಎಲ್ರೂ ಸೆಂಟ್ರಲ್ಗೆ ಮುಗಿಬೀಳುತ್ತಿದ್ದರು (ನಾವೂ ಸೇರಿದಂತೆ..) ಮಂಗಳೂರಿನ ಸೆಂಟ್ರಲ್ ಚಿತ್ರಮಂದಿರದ “ವೆಂಕಟ..” ಭಿತ್ತಿಪತ್ರಗಳ (ಪೋಸ್ಟರ್ ಗಳ) ನೋಡಿದ್ರೆ, ದೇವದಾಸ್ ಕಾಪಿಕಾಡರೇ ಹೀರೋ ಅಂದ್ಕೋಬೇಕು ನಾವು! ಅದರ ತುಂಬಾ ಅವರದ್ದೇ ಪೋಸುಗಳು! ಚಿತ್ರದಲ್ಲಿ ಅವರೇ ಮುಖ್ಯ ಹಾಸ್ಯಗಾರ, ನಗಿಸುವಲ್ಲಿ ಯಶಸ್ವಿಯಾಗಿದ್ದರೆಯೆನ್ನುವ ಅಗತ್ಯವೇ ಇಲ್ಲ. ಕಾಪಿಕಾಡರು ಇದ್ದಾರೆಂದರೆ, ನಗಲು ಇದೆಯೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ! ಆದರೂ, “ವೆಂಕಟ”ನು “ಸಂಕಟ” ನೀಡಿದನು.. ಚಿತ್ರ ಹೆಚ್ಚು ಖುಷಿಕೊಡಲಿಲ್ಲ… ಕೆಲವು ಹಾಸ್ಯ ದೃಶ್ಯಗಳ ಹೊರತುಪಡಿಸಿ…

ಜಂಗ್ಲಿ

ಜಂಗ್ಲಿ

   ನಮ್ಮ ತಲೆಗೆ ಕಳೆದು ಹೋದ ಚೇತನವನ್ನು ತರಿಸಲೆಂದು ಹೋಟೇಲಿಗೆ ಹೋದೆವು. ಚಹಾ ಹೀರುತ್ತಾ ಗೆಳೆಯ ಹೇಳಿದ, “ಜಂಗ್ಲಿ” ನೋಡುವ ಮಾರೆ.. ಒಳ್ಳೆ ಉಂಟು..” ಮತ್ತೆ “ದೂಸ್ರಾ ಮಾತಿಲ್ಲ”! ಸೀದಾ ಹೊರಟೆವು, ರಾಮಕಾಂತಿ ಚಿತ್ರಮಂದಿರಕ್ಕೆ. ವಿಶೇಷವೇನೆಂದರೆ, ಅಲ್ಲಿ ಹಿಂದೆ ಯಾವ ಚಿತ್ರಕ್ಕೆ ಹೋಗಿದ್ದೆ ಅನ್ನೋದೇ ನೆನಪಿಲ್ಲ! ಮಿತ್ರನು ಅಲ್ಲಿ “ಜೋಗಿ” ನೋಡಿದ್ದ. ಅಲ್ಲಿ ತುಂಬಾ ವರ್ಷಗಳ ಹಿಂದೆ “ಮೈನೆ ಪ್ಯಾರ್ ಕಿಯಾ” ನೋಡಿದ್ದ ನೆನಪು… ಮತ್ತೆ ಹೋಗಿದ್ದೆನು, ಆದ್ರೆ, ಚಿತ್ರ ಯಾವುದೆಂದು ಹೊಳೀತಿಲ್ಲ. ಬಿಡಿ, ಯಾಕೆ ಹಳೇ ಮಾತು… ಜಂಗ್ಲಿ ನೋಡಿ ಖುಷಿಯಾಯ್ತು! ಒಂಥರಾ ಭಿನ್ನ ಶೈಲಿಯಲ್ಲಿತ್ತು ಅದರ ಚಿತ್ರಕಥೆ, screenplay. ಛಾಯಾಗ್ರಹಣವಂತೂ ಸೂಪರ್! ಶುರುವಿನಿಂದ ಕಡೆಯವರೆಗೂ! ಕೆ.ಆರ್.ಪುರಮ್ ಕೇಬಲ್ ಸೇತುವೆಯ ಬಳಿ ಶುರುವಾದ “ಜಂಗ್ಲಿ” ಕೊನೆಯವರೆಗೂ ನೋಡಿಸಿಕೊಂಡು ಹೋಯಿತು. ಎಲ್ಲೂ “ಬೋರ್” ಆಗ್ಲಿಲ್ಲ. ಸೊಗಸಾದ ಹಾಡುಗಳು, (ಕಂಗ್ಲಿಷ್ ಆದ್ರೂ ಚೆನ್ನಾಗಿತ್ತು!) ಇನ್ನೂ ಸೊಗಸಾದ ಚಿತ್ರೀಕರಣ, ಛಾಯಾಗ್ರಹಣ… ಉಳಿದ ತಾಂತ್ರಿಕತೆಗಳು! ರಾಮಕಾಂತಿಯ ದೊಡ್ಡ, ಅಗಲ ಪರದೆಯಮೇಲೆ, ಸುತ್ತುವರಿ ಧ್ವನಿ ವಿಶೇಷಗಳ ನಡುವೆ “ಜಂಗ್ಲಿ” ಮಿಂಚಿತು. ಕಥೆಯೇನೂ ವಿಶೇಷವಿಲ್ಲದಿದ್ದರೂ, ಅದನ್ನು ಸಾಗಿಸಿದ ರೀತಿ ಖುಷಿ ತಂದಿತು. ಎಲ್ಲರ ಅಭಿನಯವೂ ಚೆನ್ನಾಗಿತ್ತು. ವಿಶೇಷವಾಗಿ, ರಂಗಾಯಣ ರಘು-ವಿಜಯ್ ಅವರದು. ಹೆಚ್ಚೇನೂ ಇಲ್ಲ ಚಿತ್ರದಲ್ಲಿ, ಮಸಾಲಾ ಮನೋರಂಜನೆ. ಆದರೆ, ಒಮ್ಮೆ ನೋಡಿ ಆನಂದಿಸಬಹುದು…

    ಚಿತ್ರಗಳ ಕಥೆ ಹೇಳಿ ಮೋಜು ಹಾಳು ಮಾಡಲು ಹೋಗಲ್ಲ! ನೀವೇ ನೋಡಿ. ನಮಗಿಷ್ಟವಾದುದು ನಿಮಗೆ ಆಗದೆಯೂ ಇರಬಹುದು. ಇಷ್ಟವಾಗದು ನಿಮಗೆ ಇಷ್ಟವಾಗಲೂ ಬಹುದು… ಅಂದ ಹಾಗೆ, ಸಂಜೆ ಷೋ, “ಸಂಕಟ”ವಾಗಿ, ರಾತ್ರಿ ಷೋ “ಜಂಗ್ಲಿ”ಯಾಯ್ತು. ಮೂರನೇ ಚಿತ್ರ ಅಂದೇ ನೋಡಿ ನಮ್ಮ ದಾಖಲೆ ಮುರಿಯಲಾಗಲಿಲ್ಲ…


ಪ್ರಲೇಖ(Pralekha)

©2009 Pradeep Hegde. All rights reserved.