ಕಣಜ | ಅಂತರಜಾಲ ಕನ್ನಡ ಜ್ಞಾನಕೋಶ

ಕಣಜ | ಅಂತರಜಾಲ ಕನ್ನಡ ಜ್ಞಾನಕೋಶ

ಕಣಜ | ಅಂತರಜಾಲ ಕನ್ನಡ ಜ್ಞಾನಕೋಶ

ಇತ್ತೀಚೆಗೆ  “ಕಣಜ” ಎಂಬ ಅಂತರ್ಜಾಲ ತಾಣದ ಬಗ್ಗೆ ತಿಳಿದು ಬಂತು. ಇದನ್ನು ನೋಡಲು ಹೋದಾಗ ಇದು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಯೋಜನೆಯು ರೂಪಿಸಿ, ಇಂಟರ್‌ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಇನ್‌ಫಾರ್ಮೇಶನ್ ಟೆಕ್ನಾಲಜಿಯು (ಐಐಐಟಿ-ಬಿ) ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶ ಎಂದು ತಿಳಿದುಬಂತು.

ಕನ್ನಡದಲ್ಲಿ ಇರುವ ಎಲ್ಲ ಬಗೆಯ ಸಾಹಿತ್ಯವನ್ನೂ ಕಲಿಕೆಗಾಗಿ ಸಾರ್ವಜನಿಕರಿಗೆ ನೀಡುವುದು ಈ ಯೋಜನೆಯ ಉದ್ದೇಶವಾಗಿದೆ. ಅಲ್ಲದೇ, ‘ಕಣಜದಲ್ಲಿ ನಾವು-ನೀವೂ ಸಹ ಬರೆಯಬಹುದು . ಕನ್ನಡ ಭಾಷೆಯಲ್ಲಿ ಯಾವುದೇ ಮಾಹಿತಿಗೆ ಏಕೈಕ ಮೂಲವಾಗುವ, ವಿವಿಧ ಸಂಸ್ಥೆ ಮತ್ತು ವ್ಯಕ್ತಿಗಳಿಂದ ಮಾಹಿತಿಗಳನ್ನು ಪಡೆದು ಅವುಗಳನ್ನು ಸಾರ್ವಜನಿಕ ಬಳಕೆಗಾಗಿ ಕನ್ನಡ ಭಾಷೆಯಲ್ಲಿ, ವಿದ್ಯುನ್ಮಾನ ರೂಪದಲ್ಲಿ, ವಿಶ್ವವ್ಯಾಪಿ ಜಾಲತಾಣದಲ್ಲಿ (www.kanaja.in) ಪ್ರಕಟಿಸುವುದು “ಕಣಜ” ದ ಉದ್ದೇಶವಾಗಿದೆ. ಮಾಹಿತಿಗಳು ಆದಷ್ಟೂ ಅಧಿಕೃತವೂ, ಖಚಿತವೂ, ಸಂಪೂರ್ಣವೂ, ಗುಣಮಟ್ಟದ್ದೂ ಆಗಿರುವಂತೆ ತಜ್ಞರ ನೆರವನ್ನು ಪಡೆದು ಎಲ್ಲ ಮಾಹಿತಿಗಳನ್ನೂ ಪರಾಮರ್ಶೆಗೆ ಒಳಪಡಿಸಿಯೇ ಪ್ರಕಟಿಸುವುದು. ಹೆಚ್ಚಿನ ಮಾಹಿತಿಗೆ ಈ ಕೊಂಡಿಯನ್ನು ಒತ್ತಿರಿ ಹಾಗೂ, `ಕಣಜ’ ಜಾಲತಾಣದಲ್ಲಿ ಪ್ರತಿದಿನವೂ ಒಂದು ಹೊಸ ಲೇಖನವು ಪ್ರಕಟವಾಗುವುದು. ವಿವಿಧ ವಿಷಯತಜ್ಞ ಲೇಖಕರು ತಿಂಗಳಿಗೊಮ್ಮೆ ಕನ್ನಡಿಗರ ಅರಿವಿನ ವಿಸ್ತಾರಕ್ಕೆ ನೆರವಾಗುವ ಲೇಖನಗಳನ್ನಿಲ್ಲಿ ಬರೆಯುವರು. ಕನ್ನಡ ಭಾಷೆ, ಸಾಹಿತ್ಯ, ವಿಜ್ಞಾನ, ತಂತ್ರಜ್ಞಾನ, ಕೃಷಿ, ರೈತರ ಅನುಭವ, ಕಲೆ, ಸಂಗೀತವೆಂಬಂತೆ ಹಲವಾರು ಅಂಕಣಗಳಿವೆ. ಕನ್ನಡ/ಆಂಗ್ಲದಲ್ಲಿ ಟೈಪ್ ಮಾಡುವ ಸೌಲಭ್ಯವೂ ಇದೆ (ಕಣಜದ ಪುಟಗಳಲ್ಲಿ ಬಲ ಮೇಲ್ಭಾಗದಲ್ಲಿ ಈ ಸೌಲಭ್ಯ ಕಾಣಿಸುವುದು). ಇದಲ್ಲದೇ, ಉಪಯುಕ್ತಕಾರಿ ಕನ್ನಡ ಶಬ್ದಕೋಶವನ್ನೂ ಹೊಂದಿದೆ.

ಒಂದು ವಿಪರ್ಯಾಸವೇನೆಂದರೆ, “ಕಣಜ” ಶಬ್ದಾರ್ಥದ ಶೋಧನೆಗೆ ಯಾವುದೇ ಫಲಿತಾಂಶ ಒದಗಲಿಲ್ಲ! ಮುಂದಿನ ದಿನಗಳಲ್ಲಿ ಶಬ್ದಕೋಶದ ಅಭಿವೃದ್ಧಿಯಾಗುವುದೆಂದು ಬಯಸುವೆ. ಕನ್ನಡವನ್ನು ಉಳಿಸುವ, ಹಾಗೂ ಅಂತರ್ಜಾಲ ಮಾಧ್ಯಮದ ಮೂಲಕ ಕನ್ನಡವ ಪಸರಿಸುವ ನಿಟ್ಟಿನಲ್ಲಿ ರೂಪಿಸಿದ ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಈ ಯೋಜನೆ ನಿಜಕ್ಕೂ ಸಂತಸದ ಸುದ್ದಿ. ಕನ್ನಡವನ್ನು ಉಳಿಸೋಣ, ಬೆಳೆಸೋಣ.