ರೈಲು ವಿಸ್ತರಣೆ : ಮಂಗಳೂರಿನ ರೈಲು ಪ್ರಸಂಗ

ಮಂಗಳೂರಿನ ರೈಲು ಪ್ರಸಂಗ

ರೈಲು ವಿಸ್ತರಣೆ


ಮಂಗಳೂರು-ಮುಂಬೈ ನಡುವಿನ ಮಂಗಳೂರು ಜಂಕ್ಷನ್-ಛತ್ರಪತಿ ಶಿವಾಜಿ ಟರ್ಮಿನಸ್(CST) ರೈಲು ಈಗ “ಮುಂಬೈ ಎಕ್ಸ್ ಪ್ರೆಸ್” (12133/34) ಎಂದು ಮರುನಾಮಕರಣಗೊಂಡಿದೆ. ಉದಯವಾಣಿಯ ವರದಿಯ ಪ್ರಕಾರ, ಇದರ ಹಿಂದೆ ಈ ರೈಲನ್ನು ಎರ್ನಾಕುಲಂಗೆ ವಿಸ್ತರಿಸುವ ಹುನ್ನಾರ ಕಂಡುಬಂದಿದೆ [೧]. ಬಹುಜನರ ಬೇಡಿಕೆಯ ಮೇರೆಗೆ ಪ್ರಾರಂಭಿಸಿದ್ದ ಈ ಎಕ್ಸ್ ಪ್ರೆಸ್ ರೈಲನ್ನು ಮುಂಬೈನ CST ಹಾಗೂ ಮಂಗಳೂರು ಜಂಕ್ಷನ್ ನಡುವೆ ಮಾತ್ರ ಓಡಿಸುತ್ತಿದ್ದರು. ಇದು ಮಂಗಳೂರು ಸಿಟಿ ಟರ್ಮಿನಲ್ಲಿಗೆ ಹೋಗುತ್ತಿರಲಿಲ್ಲ. ಕೇರಳಕ್ಕೆ ವಿಸ್ತರಿಸುವ ಅಂದಾಜು ಪ್ರಾರಂಭದಿಂದಲೇ ಇತ್ತೆಂದು ತೋರುತ್ತದೆ [೧], ಏಕೆಂದರೆ, ಕೇರಳದ ಕಡೆ ಮಂಗಳೂರಾಗಿ ಹಾದು ಹೋಗುವ ಎಲ್ಲಾ ರೈಲುಗಳು ಮಂಗಳೂರು ಜಂಕ್ಷನ್ ಆಗಿಯೇ ಹೋಗಬೇಕು. ಟರ್ಮಿನಲ್ಲಿಗೆ ಹೋದರೆ ಅಲ್ಲಿ ಎಂಜಿನ್ ದಿಕ್ಕು ಬದಲಿಸಿ ತಿರುಗಿ ಬರಬೇಕು. ಇದಾದಲ್ಲಿ ಇನ್ನೊಂದು ಮಂಗಳೂರಿಗಂತಿದ್ದ ರೈಲು ಕೇರಳಕ್ಕೆ ವಿಸ್ತರಣೆಗೊಳ್ಳುವುದು. ಈ ಹಿಂದೆ ಬೆಂಗಳೂರು-ಮಂಗಳೂರು ನಡುವೆ ಇದ್ದ “ಯಶವಂತಪುರ ಎಕ್ಸ್ ಪ್ರೆಸ್” ಕೇರಳದ ಕಣ್ಣೂರಿಗೆ ವಿಸ್ತರಿಸಲ್ಪಟ್ಟಿತ್ತು.

ಮೀಟರ್ ಗೇಜಿನಿಂದ ಬ್ರಾಡ್ ಗೇಜಿನ ಪರಿವರ್ತನೆಗೆ ಹತ್ತು ವರುಷಗಳೇ ಬೇಕಾದವು. ಅದರಲ್ಲಿ ಸಕಲೇಷಪುರ-ಮಂಗಳೂರು ಜಂಕ್ಷನ್ನಿನ ಕಾಮಗಾರಿಗೇ ಹೆಚ್ಚು ವರುಷಗಳು ಬೇಕಾದವು. ೧೯೭೯ರಲ್ಲೇ ಶುರುವಾದ ಮೀಟರ್ ಗೇಜ್ ಕಾಲದಲ್ಲಿ ಮಂಗಳೂರಿಂದ ಬೆಂಗಳೂರಿಗೆ, ನನಗೆ ನೆನಪಿದ್ದಂತೆ ಮೂರು ರೈಲುಗಳಾದರೂ ಇದ್ದವು. ನವೆಂಬರ್ ೨೦೦೫ರಲ್ಲಿ ಮುಗಿದ ಗೇಜ್ ಪರಿವರ್ತನೆ ಕಾರ್ಯದ ಬಳಿಕ ಗೂಡ್ಸ್ ರೈಲುಗಳು ಓಡಾಡುತ್ತಿದವು. ಇದಾಗಿ ಎರಡು ವರುಷದ ವರೆಗೆ ನೆಪಗಳನ್ನೋಡ್ಡಿದ ಬಳಿಕ, ರೈಲ್ವೇಯವರು ಅಂತೂ ಡಿಸೆಂಬರ್ ೨೦೦೭ರಲ್ಲಿ ಯಶವಂತಪುರ-ಬೆಂಗಳೂರು ರೈಲನ್ನು (ಯಶವಂತಪುರ ಎಕ್ಸ್ ಪ್ರೆಸ್) ಪ್ರಾರಂಭಿಸಿದರು. ಪ್ರತಿ ರಾತ್ರಿ ಮಂಗಳೂರು ಹಾಗೂ ಬೆಂಗಳೂರಿನಿಂದಿದ್ದ ಈ ರೈಲು ಮೈಸೂರು ಮಾರ್ಗವಾಗಿ ಹೋಗುತ್ತಿತ್ತು (~೧೨ ತಾಸಿನ ಪ್ರಯಾಣ). ಮೊದಲಿನ ಮೀಟರ್ ಗೇಜ್ ಬೆಂಗಳೂರು ರೈಲು ತುಮಕೂರು-ಅರಸೀಕೆರೆ ಮೇಲೆ ಓಡುತ್ತಿತ್ತು (~೧೦ ತಾಸಿನ ಪ್ರಯಾಣ). ಆದರೆ, ಡಿಸೆಂಬರ್ ೨೦೦೯ರಲ್ಲಿ ಹತ್ತು ವರುಷ ತಾಳ್ಮೆಯಿಂದ ಕಾದ ಮಂಗಳೂರಿಗೆ ಪ್ರಾರಂಭವಾಗಿ ಎರಡೇ ವರುಷದಲ್ಲಿ ಈ ರೈಲು ಕೇರಳದ ಕಣ್ಣೂರಿಗೆ ವಿಸ್ತರಣೆಯಾಗುವ ಉಡುಗೊರೆ ದೊರಕಿತು. ಎರಡು ತಿಂಗಳ ಹಿಂದೆ, ಎರಡು ದಿನಕ್ಕೊಮ್ಮೆ ವಾರಕ್ಕೆ ಮೂರು ಸಲ ಓಡುವ ಹಗಲು ರೈಲು ಜನರ ಒತ್ತಾಯದ ಮೇರೆಗೆ ಕಾರವಾರಕ್ಕೆ ಇತ್ತೀಚೆಗೆ (ಪುಣ್ಯಕ್ಕೆ ನಮ್ಮ ಕರಾವಳಿಗೇ) ವಿಸ್ತರಣೆಗೊಂಡಿದೆ[೨]. ಈ ರೈಲು ತುಮಕೂರು-ಅರಸೀಕೆರೆ ಮಾರ್ಗವಾಗಿ ಓಡುವುದು. ಮಂಗಳೂರಿನಿಂದ ಬೆಂಗಳೂರಿನೆಡೆಗೆ ಓಡುವುದು ಸಧ್ಯಕ್ಕೆ ಈ ಎರಡೇ ರೈಲುಗಳು.

ಕರ್ನಾಟಕದ ಬಂದರು ನಗರಿ ಮಂಗಳೂರು ತನ್ನ ರಾಜ್ಯದ ರಾಜಧಾನಿಗೆ ರೈಲಿನ ಮೂಲಕ ಈ ಬಗೆಯ ಸಂಪರ್ಕವಿರುವುದು ವಿಪರ್ಯಾಸ. ಈ ಎರಡು ನಗರಗಳ ನಡುವಿನ ಜನಸಂಚಾರ ಹೆಚ್ಚಿಗೆ ಇದ್ದು, ರೈಲ್ವೇಯವರಿಗೆ ಸರಿಯಾದ ರೈಲು ಸಂಪರ್ಕ ಸಾಧಿಸಿದಲ್ಲಿ ನಷ್ಟವಲ್ಲ, ಲಾಭವೇ. ಆದರೂ ಹಾಗೆ ಯಾಕಾಗುತ್ತಿಲ್ಲವೆಂಬುದೇ ಯಕ್ಷ ಪ್ರಶ್ನೆಯಾಗಿದೆ. ಇನ್ನೊಂದು ವಿಪರ್ಯಾಸವೇನೆಂದರೆ, ಮಂಗಳೂರಿನಿಂದ ಚೆನ್ನೈಗೆ ಇರುವ “ಚೆನ್ನೈ ಮೇಲ್” ಈಗಲೂ ಕೇರಳವಾಗಿ ತಮಿಳು ನಾಡಿನ ಕೊಯಮುತ್ತೂರಿನ ಮೂಲಕ ತುಂಬಾ ಸುತ್ತಾಗಿ ಹಾದು ಹೋಗುವುದು. ಈ ದಾರಿಯಲ್ಲಿ ರೈಲಿನಲ್ಲಿ ಚೆನ್ನೈಗೆ ಹೋದರೆ ಮಂಗಳೂರಿಂದ ಮುಂಬೈಗೆ ಹೋದಕ್ಕಿಂತ ಹೆಚ್ಚು ಹೊತ್ತು ಬೇಕಾಗುವುದು! [೩] [ಈ ಸ್ವಾರಸ್ಯಕರ ಬ್ಲಾಗ್ ಪೋಸ್ಟ್ ನೋಡಿ. ಆಂಗ್ಲ ಭಾಷೆಯಲ್ಲಿದೆ.] ಮಂಗಳೂರಿಂದ ಚೆನ್ನೈಗೆ ಹೋಗಲು ಈ ರೈಲಿನ ಪ್ರಯೋಜನವಾದರೂ ಏನು? ಇದರಿಂದ ಯಾರಿಗೆ ನಿಜವಾದ ಪ್ರಯೋಜನವೆಂದು ಬಿಡಿಸಿ ಹೇಳಬೇಕಾಗಿಲ್ಲ ತಾನೆ. ಈ ರೈಲು ಈಗ ಬೆಂಗಳೂರಾಗಿ ಓಡಿದರೆ ಅರ್ಥವಿರುತ್ತದೆ. ಆದರೆ, ಒಂದು ಪಕ್ಷ ಹಾಗಾದಲ್ಲಿ ಈ ರೈಲೂ ಕೇರಳದ ಯಾವುದೋ ಊರಿಗೆ ವಿಸ್ತರಣೆಗೊಂಡರೆ ಆಶ್ಚರ್ಯವೇನಿಲ್ಲ! ಕರಾವಳಿ ಕರ್ನಾಟಕದಿಂದ ರಾಜ್ಯದ ಇತರ ಭಾಗಗಳಿಗೆ ರೈಲು ಸಂಪರ್ಕ ಇಂದಿಗೂ ಸರಿಯಾಗಿಲ್ಲ. ಕರ್ನಾಟಕದ ರೈಲ್ವೇ ನಕಾಷೆಯ ಹಾಗೂ ವೇಳಾಪಟ್ಟಿಯ ನೋಡಿದರೆ ರಾಜ್ಯದಲ್ಲಿನ ರೈಲಿನ ವ್ಯವಸ್ಥೆ ಹೇಗಿದೆ ಎಂದು ಎಂಥವನಿಗೂ ಗೋಚರಿಸುವುದು. ಮಂಗಳೂರು ಹಾಗೂ ಮಂಗಳೂರು ಜಂಕ್ಷನ್ ರೈಲು ನಿಲ್ದಾಣವು ಈಗಲೂ ದಕ್ಷಿಣ ರೈಲ್ವೆಯ ಪಾಲ್ಘಾಟ್ ವಲಯದಲ್ಲಿದೆ. ಬಹುಕಾಲಿಕ ಆಗ್ರಹದ ಬಳಿಕವೂ ಈ ನಿಲ್ದಾಣಗಳು ದಕ್ಷಿಣ-ಮಧ್ಯ ರೈಲ್ವೆಯ ಮೈಸೂರು ವಲಯಕ್ಕೆ ಹಸ್ತಾಂತರಗೊಂಡಿಲ್ಲ.

ಈಗ ಕೇರಳಕ್ಕೆ ವಿಸ್ತರಣೆಗೊಳ್ಳಬಹುದಾದ “ಮುಂಬೈ ಎಕ್ಸ್ ಪ್ರೆಸ್” ಅನ್ನು ಹೊರತುಪಡಿಸಿ ಮಂಗಳೂರಿನಿಂದಲೇ ಮುಂಬೈಗೆ ಹೊರಡುವ ರೈಲೆಂದರೆ ಮಂಗಳೂರು ಸಿಟಿ ಟರ್ಮಿನಲ್ಲಿನಿಂದ ಹೊರಡುವ “ಮತ್ಸಗಂಧಾ ಎಕ್ಸ್ ಪ್ರೆಸ್” ಮಾತ್ರ. ರಾಜ್ಯದಲ್ಲಿ ರೈಲಿನ ಬಗೆಗೆ ರಾಜ್ಯದ ನಾಯಕರ ದಿವ್ಯ ನಿರ್ಲಕ್ಷ್ಯ ಮುಂದುವರೆಯುತ್ತಾ ಕನ್ನಡ ಕರಾವಳಿಯು ಉತ್ತಮ ರೈಲು ಸೇವೆಯಿಂದ ಇಂದಿಗೂ ವಂಚಿತವಾಗಿದೆ.

ಪ್ರಲೇಖ

ಟಿಪ್ಪಣಿಗಳು:
[೧] ಮಂಗಳೂರು ಜಂಕ್ಷನ್‌ ಎಕ್ಸ್‌ಪ್ರೆಸ್‌ ಈಗ ಮುಂಬಯಿ ಎಕ್ಸ್‌ಪ್ರೆಸ್‌:ಕೇರಳಕ್ಕೆ ವಿಸ್ತರಣೆಗೆ ಪೀಠಿಕೆ : Udayavani | Dec 25, 2011
[೨]The Hindu:Yeshwanthpur-Mangalore express extended to Karwar
[೩] Karthik’s Log : From Mangalore to Chennai

ಚಿತ್ರ ಕೃಪೆ:
[೧] Train-2.jpg is a cropped image derived from 7032 HYB_Jambrung_Indian_Railways.jpg By HarshWCAM3 (IMG_0304Uploaded by oxyman) [CC-BY-SA-2.0], via Wikimedia Commons