ದಾರಿಹೋಕನ ರಗಳೆಗಳು:: ಶ್ವಾನಮತ್ತ ನಾಗರೀಕರು

:ದಾರಿಹೋಕನ ರಗಳೆಗಳು::ರಗಳೆ-೨::

ಅರೆರೆ! ಇದೇನಪ್ಪಾ… ಒಮ್ಮೆ ಕೆರೆ ಗಿರೆ ಅಂತ ಏನೆಲ್ಲಾ ಒದರಿ ಹೋದ ದಾರಿಹೋಕ ನಿದ್ದೆಯಿಂದೆದ್ದನೇ ಅಂದುಕೊಂಡಿರಾ… ಹಾಗೇನಿಲ್ಲ. ಇಲ್ಲಿ ನಿದ್ದೆ ಮಾಡೋರು ಬಹಳಷ್ಟು ಮಂದಿ ಇದಾರೆ. ದೊಡ್ಡದಾದ ಊರಲ್ಲಿ ದಾರಿಹೋಕರಿಗೇನು ಕಮ್ಮಿಯೇ? ರಸ್ತೆಗಿಳಿದರೆ ಸಿಗುವರೇ ವಿವಿಧ ಬಗೆಯ ದಾರಿಹೋಕರು. ಆಹಾ! ಎಷ್ಟೊಂದು ವಿಧ! ಇವರಲ್ಲಿ ಒಂದು ವಿಧದ ಬಗ್ಗೆ ಇವತ್ತು ನಿಮ್ಮ ತಲೆ ತಿನ್ನಲು ಬಯಸುತ್ತೇನೆ. ಇವರು ಒಂಥರಾ ಅಂತಸ್ತು ಹುಚ್ಚು (“status craze”) ಇರೋ ವಿಧಕ್ಕೆ ಸೇರುತ್ತಾರೆ ನೋಡಿ. ಇವರಲ್ಲಿ ಕೆಲವರು ಶ್ವಾನ ಪ್ರೇಮಿಗಳೂ ಆಗಿರಬಹುದು. ಆದರೆ ಮೊದಲನೇ ವಿಧವೇ ಹೆಚ್ಚೆನಿಸುತ್ತದೆ. ಈಗಾಗಲೇ ಇದೇನು ರಗಳೆ ಅಂತ ಹೊಳೆದಿರಬೇಕು ನಿಮಗೆ. ಪೀಠಿಕೆ ಸಾಕು. ನೇರವಾಗಿ ವಿಷಯಕ್ಕೆ ಬರೋಣ. (ಕ್ಷಮಿಸಿ, ಅಷ್ಟೊಂದು ನೇರವಾಗಿ ಅಲ್ಲ..)

::ಶ್ವಾನಮತ್ತ ನಾಗರೀಕರು::
ಬೆಂಗಳೂರಿನಲ್ಲಿ ಅಂದು ಧಾರಾಕಾರ ಮಳೆ. ಎಲ್ಲೆಲ್ಲೂ ಉಕ್ಕಿ ಹರಿಯುವ ನೀರು. ಚರಂಡಿಯಲ್ಲಿ ಮಾತ್ರವಲ್ಲ ಸ್ವಾಮಿ, ದಾರಿಯಲ್ಲೂ. ಈ ಮಳೆನೀರು ನೆಲ ಮುಟ್ಟುವಾಗ ಎಷ್ಟು ಶುದ್ಧವಾಗಿರುವುದೋ* (*ವಾಯುಮಂಡಲದಿಂದ ಮಲಿನಗೊಂಡಿರದಿದ್ದಲ್ಲಿ) ನೆಲಕ್ಕಪ್ಪಳಿಸಿದಂತೆಯೇ ನೆಲದ ಎಲ್ಲಾ ಅಂಶಗಳನ್ನೂ ತನ್ನೊಡನೆ ಕರೆದುಕೊಂಡು ಹರಿಯತೊಡಗುತ್ತೆ. ನೀರು ಒಂಥರಾ ನಿಜವಾದ ಜಾತ್ಯಾತೀತವಾದಿ ನೋಡಿ. ಅದಕ್ಕೆ ಭೇದ ಭಾವ ತಿಳಿಯದು… ನೀನು ಮಣ್ಣು, ನೀನು ಮರಳು, ನೀನು ಕಸ, ನೀನು ಕಡ್ಡಿ, ನೀನು ನಾಯಿ ಹೇಲು… ಅಂತೆಲ್ಲಾ ಹೇಳಿ ತನ್ನೊಡನೆ ಕರೆದೊಯ್ಯದೇ ಇರದು. ರಸ್ತೆಯಲ್ಲಿ ನಡೆದಾಡುವಾಗ ಈ ನೀರಲ್ಲಿ ನಮ್ಮ ಪಾದಗಳ/ಪಾದುಕೆಗಳ ಪಾವನ ಮಾಡಿಸದೇ ಹೋಗುವಂತಿಲ್ಲ. ಮಣ್ಣು, ಕಸ, ಕಡ್ಡಿ ಯೆಲ್ಲಾ ಓಕೆ! ಆದರೆ, ನೀರಲ್ಲಿ ಅರ್ಧ ಕರಡಿದ ನಾಯಿ ಹೇಲು ಬೇಕೇ?! ….

ನಿಮ್ಮ ವಾಂತಿ ಮಾಡುವ ಕಾರ್ಯ ಮುಗಿದಲ್ಲಿ ಮುಂದೆ ಓದಿ….

ಇನ್ನೂ ಬಂದಂತನಿಸುತ್ತಿದೆಯೇ? ನೀವು ಶೀಘ್ರ ವಾಂತಿ ಬರುವವರಾದಲ್ಲಿ ಮುಂದೆ ಓದಬೇಡಿ. ಮನಸ್ಸು ಹಗುರಾಗಿಸಲು ಪ್ರಕವಿಯ ವಲಯಕ್ಕೆ ಭೇಟಿ ನೀಡಿ. ಇಲ್ಲವಾದಲ್ಲಿ ಮುಂದುವರೆಸಿ….

ಹೇಲುತ್ತಿರುವ ನಾಯಿ

ಹೇಲುತ್ತಿರುವ ನಾಯಿ

ಹೇಸಿಗೆಯೆನಿಸಿತೇ? ಅನಿಸದೇ ಇರದು. ಇದನ್ನು ಅಕ್ಷರ ರೂಪದಲ್ಲಿ ಓದಿದಾಗಲೇ ಹೀಗಾದಲ್ಲಿ, ಇನ್ನು ಇದನ್ನು ಕಣ್ಣಾರೆ ಕಾಣುವ (ಅದೃಷ್ಟ ನೆಟ್ಟಗಿರದಿದ್ದಲ್ಲಿ ಇದನ್ನು ಮೆಟ್ಟುವ) ನಮ್ಮಂತಹ ದಾರಿಹೋಕರಿಗಾಗುವ ಪಾಡೇನೆಂದು ಅರ್ಥವಾಗಿರಬೇಕು. “ಸ್ವಚ್ಛ ಬೆಂಗಳೂರು” ಎಂದೆಲ್ಲಾ ಗೋಡೆಗಳನ್ನೆಲ್ಲಾ ಅಂದಗೊಳಿಸುತ್ತಿರುವ ಬಿ.ಬಿ.ಎಂ.ಪಿ ಯವರ ಪಾದವಿನ್ನೂ ಈ ನೀರಿನಲ್ಲಿ ಪಾವನವಾದಂತಿಲ್ಲ. ಬಣ್ಣ ಬಣ್ಣದ ಚಿತ್ರ ಬಿಡಿಸಿ ಕಣ್ಣುಗಳನ್ನು ಮೂರ್ಖರನ್ನಗಿಸಬಹುದೇ ಹೊರತು, ಮೂಗನ್ನಲ್ಲ, ಪಾದುಕೆಗಳನ್ನಲ್ಲ. ಯಾಕ್ರೀ, ನಾಯಿ ಹೇಲೊಂದೇ ಪಾವಗೊಳಿಸುತ್ತೆಯೇ ಹರಿವ ನೀರನ್ನು? ಎಲ್ಲೆಂದರೆಲ್ಲಿ ಮಾಡಿದ ಉಚ್ಚಿಯೇನು ನೀರಲ್ಲಿ ಬೆರೆಯದೇ, ಎಂದೆಲ್ಲಾ “ಶ್ವಾನ ಪ್ರಿಯರು” ಈ ಕ್ಷಣವೇ ಸವಾಲೆಸೆಯಲು ಹಲ್ಲು ಮಸೆಯುತ್ತಿರುತ್ತಾರೆ. ಅದು ಬೇರೆ ವಿಷಯ ಬಿಡಿ. ಹಣ ಪಾವತಿಸಿ ಯಾವ ಮುಠ್ಠಾಳ ಉಚ್ಚಿ ಮಾಡುವನು? ಉಚ್ಚಿ ಮಾಡಲೂ ತೆರಿಗೆಯೇ? ಅದರ ಬದಲು, ಉಚಿತ ಮೂತ್ರಾಲಯಗಳ ತೆರೆದರೆ ನಿಜವಾದ ಉಪಕಾರವಾಗುವುದು ನಾಗರೀಕ ಸಮಾಜಕ್ಕೆ. ಇದು ಬೇರೆ ರಗಳೆ ಬಿಡಿ, ಈ ಬಗ್ಗೆ ಮುಂದಿನ ಸಾರಿ ತಲೆ ತಿನ್ನೋಣ. ಸಧ್ಯ ನಾಯಿ ಹೇಲಿಗೆ ವಾಪಸ್ಸು ಬರೋಣ…

ಇದು ಶ್ವಾನಪ್ರಿರಿರುವ ಬಹುತೇಕ ಎಲ್ಲಾ ವಲಯಗಳಲ್ಲೂ ದಾರಿಯಲ್ಲಿ ಬೆಳಬೆಳಗ್ಗೆ ಕೆಲಸಕ್ಕೆ ಹೊರಟಾಗ ಶುಭೋದಯ ಹೇಳಲು, ಸಂಜೆ ಹಿಂತಿರುಗಿ ಬಂದಾಗ ನಿಮ್ಮ ಪಾದಗಳ ಮುತ್ತಿಕ್ಕಿ ಸ್ವಾಗತಿಸಲು ಪ್ರೀತಿಯಿಂದ ನೀವು ಬರುವ ದಾರಿ ನೋಡುತ್ತಿರುತ್ತವೆ. ಇಲ್ಲವಾದಲ್ಲಿ, ವಿವಿಧ ಆಕಾರಗಳ, ವಿವಿಧ ಬಗೆಯ ನಾಯಿಗಳ ಪಟ್ಟಿ ಹಿಡಿದು ಅದಕ್ಕೆ “ವಾಕಿಂಗ್” ಮಾಡಲು ಕರೆತಂದಿರುವ ಮಹನೀಯ ದಾರಿಹೋಕರು ಕಾಣಸಿಗುತ್ತಾರೆ. ಅದೆಂತಹಾ ನಾಯಿಗಳೋ… ದೈತ್ಯಾಕಾರದ ನಾಯಿಗಳು, ಭೂತಾಕಾರದ ನಾಯಿಗಳು, ಇಲಿಯಾಕಾರದ ನಾಯಿಗಳು, ಮತ್ತು “ಮಿನಿ”, “ಮೈಕ್ರೋ” ನಾಯಿಗಳೂ ಸಹ! ದೈತ್ಯಾಕಾರದ ನಾಯಿಗಳು! ಮನಸ್ಸು ಮಾಡಿದರೆ ತಮ್ಮ ಶ್ವಾನಪ್ರಿಯನನ್ನು ಬೇಕೆಂದಲ್ಲಿ ಸಲೀಸಾಗಿ ಎಳೆದುಕೊಂಡು ಹೋಗುವಂತಿರುತ್ತವೆ. ಅವುಗಳ ಆಕಾರದಂತೆಯೇ ಅವುಗಳ ಹೇಲುಗಳೂ ಬೃಹದಾಕಾರದ ಹೇಲುಗಳು. (ಆದರೆ ಮಧ್ಯಮ, ಚಿಕ್ಕ ನಾಯಿಗಳ ಹೇಲೇನು ಬಹಳ ಕಮ್ಮಿಯಿರುವುದಿಲ್ಲ.) ಈ ನಾಯಿಗಳು ನಮ್ಮೂರಿನ ತಿರುಬೋಕಿ ನಾಯಿಗಳಂತಲ್ಲ ಸ್ವಾಮಿ, ಇವೇನು ಸಾಮಾನ್ಯ ಕಂತ್ರಿ ಕಜ್ಜಿ ನಾಯಿಗಳಾ? ಅಲ್ವೇ ಅಲ್ಲ! ನಿಲ್ಲು ಅಂದರೆ ನಿಲ್ಲುತ್ತವೆ, ಕೂರು ಅಂದ್ರೆ ಕೂರುತ್ತವೆ, ಆಡು ಅಂದರೆ ಆಡುತ್ತವೆ, ಮಲಗು ಅಂದರೆ ಮಲಗುತ್ತವೆ, ದಾರಿಯಲ್ಲಿ ಹೇಲು ಅಂದರೆ ಹೇಲುತ್ತವೆ. ಎಲಾ ಇವರಾ! ಎಷ್ಟೊಂದು ವಿಧೇಯ ಕುನ್ನಿಗಳು ನೋಡಿ. ಇವುಗಳು ಬೀದಿಯಲ್ಲಿ ಹೊರಳಾಡುವುದಿಲ್ಲ, ಎಲ್ಲೆಂದರಲ್ಲಿ ಮಲಗುವುದಿಲ್ಲ, ಸಿಕ್ಕಸಿಕ್ಕಿದುದೇನನ್ನೂ ತಿನ್ನುವುದಿಲ್ಲ. ಇವುಗಳು ದಿನವಿಡೀ ಮನೆಯೊಳಗೇ ಹಾಯಾಗಿ ಓಡಾಡಿಕೊಂಡು, ಶುಚಿಯಾಗಿರುವ ನೆಲದ ಮೇಲೆಯೇ ಹೊರಳಾಡಿಕೊಂಡು, ಪೆಡಿಗ್ರಿಯನ್ನೇ ಬಕಾಸುರನಂತೆ ತಿಂದುಕೊಂಡಿರುತ್ತವೆ. ಇವುಗಳು ಸಾಮಾನ್ಯ ಶ್ವಾನ ಪ್ರಜೆಗಳಲ್ಲ ಸ್ವಾಮೀ, “aristocratic” ಶ್ವಾನ ಪ್ರಜೆಗಳು. ಎಲ್ಲವೂ ಶುಚಿಯಾಗಿರಬೇಕು ಇವುಗಳಿಗೆ. ಆದರೆ ಹೇಲಲು ಸಾರ್ವಜನಿಕ ರಸ್ತೆಯೇ ಬೇಕು. ಇಲ್ಲವಾದಲ್ಲಿ, ಕಾಲುದಾರಿಯೇ* (*ಪ್ರೀತಿಯ ಕಂಗ್ಲೀಷ್ ಬಾಂಧವರೇ, ಕಾಲುದರಿಯೆಂದರೆ footpath) ಬೇಕು. ಆ ನಾಯಿಯ ಊಟ, ತಿಂಡಿ, ಸ್ನಾನ, ಓಡಾಟ, ಒಡನಾಟ ಎಲ್ಲಾ ಮನೆಯೊಳಗೆ. ಹೇತುಹಾಕೋ ಕೆಲಸವೊಂದು ಮಾತ್ರ ದಾರಿಯಲ್ಲಿ. ಭಲೇ ಕುನ್ನಿಗಳೇ ಇವುಗಳು! ಆದರೆ, ನಿಜವಾಗಿ ಹೇಳಬೇಕೆಂದರೆ, ಇದರಲ್ಲಿ ಆ ನಾಯಿಗಳ ತಪ್ಪಿಲ್ಲ. ಅಂತಹ ಶ್ವಾನಗಳು ಯಾವ ರೀತಿ ಜೀವಿಸುತ್ತದೆ? ಅದಕ್ಕೆ ಸ್ವಾತಂತ್ರವಿದೆಯೇ? ಯಾವತ್ತೂ ಕುತ್ತಿಗುಗೆ ಪಟ್ಟಿ, ಹುಟ್ಟಿನಿಂದ ಸಾವಿನವರೆಗೂ ಗೃಹ ಬಂಧನ. ಇದು ಯಾಕೆ ಪ್ರಾಣಿ ಹಿಂಸೆಯೆಂದು ಪರಿಗಣಿಸಲ್ಪದುವುದಿಲ್ಲ? ಪ್ರಾಣಿ ಹಿಂಸೆ ಹಾಗಿರಲಿ, ಈಗ ದಾರಿಹೋಕ ಹಿಂಸೆಗೆ ಬರೋಣ. ನಾಯಿ ಹೇಲು ಎಲ್ಲಿದೆಯೋ ಎಂದು ಹುಡುಕುತ್ತಾ ಓಡಾಡುವ ಸಾಹಸ ಯಾವತ್ತೂ ದ್ವಿಚಕ್ರ/ತ್ರಿಚಕ್ರ/ಚತುರ್ಚಕ್ರ ವಾಹನಗಳಲ್ಲೆ ಓಡಾಡುವ ಶ್ವಾನಪ್ರಿಯರಿಗೆಲ್ಲಿ ತಿಳಿದಿದೆ? ಕುರುಡು ಬಿ.ಬಿ.ಎಂ.ಪಿ ಯವರನ್ನು ಮರೆತುಬಿಡಿ, ತಮ್ಮ ನಾಯಿಯನ್ನು ದಾರಿಯಲ್ಲಿ ಹೇಲು ಹಾಕಿಸುವರನ್ನು ಹಿಡಿದು ೫೦೦ ರೂಪಾಯಿ ದಂಡ ಹಾಕಿದರೆ, ಓಳ್ಳೆಯ ಹಣ ಗಳಿಸಬಹುದಿತ್ತು ಅವರಿಗೆ. ಇಂತಹ ಶ್ವಾನಪ್ರಿಯರಿಗೆ, ನಾಲ್ಕೈದು ನಾಯಿಗಳನ್ನು ತಂದು ಅವರ ಬಾಗಿಲ ಎದುರೇ ಆ ನಾಯಿಗಳು ಹೇತು ಹಾಕುವಂತೆ ಮಾಡಬೇಕು, ಬುದ್ಧಿ ಬರಲು. ಮಂಗನ ಕೈಯಲ್ಲಿ ಮಾಣಿಕ್ಯವೆಂಬ ಗಾದೆ ಹಳತಾಯಿತು. “ಕೋತಿಯ ಕೈಯ್ಯಲ್ಲಿ ನಾಯಿ” ಎಂಬುದು ಹೊಸತು… ದುರದೃಷ್ಟಕ್ಕೆ, ಈ ಶ್ವಾನಮತ್ತ ನಾಗರೀಕರು (ಅನಾಗರೀಕರೆಂದರೆ ಹೆಚ್ಚು ಅರ್ಥಪೂರ್ಣ. ಅಲ್ವಾ..) ಈಚೆಗೆ ಜಾಸ್ತಿಯಾದಂತೆ ತೋರುತ್ತಿದ್ದಾರೆ. ಇವರ ಸಂಖ್ಯೆ ಹೀಗೆಯೇ ಹೆಚ್ಚುತ್ತಿದ್ದರೆ ಮುಂದೊಂದು ದಿನ ರಸ್ತೆಗೆ ಡಾಂಬರ್ ಹಾಕೋ ಅಗತ್ಯವೇ ಇರುವುದಿಲ್ಲ. ಜಲ್ಲಿಯಲ್ಲಿ ಮಿಶ್ರಿತ ನಾಯಿಹೇಲಿನ ಮೇಲೆಯೇ ರೋಡ್ ರೋಲರ್ ಓಡಿಸಿದರೆ ರಸ್ತೆ ಸಿದ್ಧ! ಡಾಂಬರ್ ಹಾಕಿ ಅದೇನು ಸಾಧಿಸಿದಂತಾಗುವುದು? ಹೇಗೂ ರಸ್ತೆ ನಾಯಿ ಹೇಲಲ್ಲೇ ಮುಳುಗುವುದು ತಾನೆ… ಅಲ್ಲ, ಅದ್ಯಾವ ಪುರುಶಾರ್ಥಕ್ಕಾಗಿ ಈ ಥರದ ನಾಯಿ ಸಾಕಣೆ? ರಸ್ತೆಯೆಲ್ಲ ನಾಯಿ ಹೇಲಿನ ಗೊಬ್ಬರ ಉತ್ಪಾದನೆ ಕೇಂದ್ರವನ್ನಾಗಿಸಲೇ? ನಮ್ಮಂತಹ ಬಡ ದಾರಿಹೋಕರ ಪಾದುಕೆಗಳ ಪಾವನಗೊಳಿಸಲೇ?

ನಂಗೊತ್ತಿಲ್ಲಪ್ಪಾ.....

ನಂಗೊತ್ತಿಲ್ಲಪ್ಪಾ…..

ಇಲ್ಲಿಯವರೆಗೆ ಓದಿದಾಕ್ಷಣ, ನಮ್ಮನ್ನೇ ಏಕೆ ದೂರುತ್ತೀರ? ಯಾವುದೋ ಬೀದಿನಾಗಳ ಕೃತ್ಯವನ್ನು ನಮ್ಮ ಮುಗ್ಧ ಕುನ್ನಿಯ ಮೇಲೆ ಯಾಕೆ ಹೊರಿಸುತ್ತೀರ? ಎಂದೆಲ್ಲ ಶ್ವಾನಪ್ರಿಯರು ಕೂಗಾಡಲು ಶುರುಹಚ್ಚಿಕೊಳ್ಳುತ್ತಾರೆ. ಶ್ವಾನಪ್ರಿಯರೆಂದರೆ ತಪ್ಪಾದೀತು. ನಿಜವಾದ ಶ್ವಾನಪ್ರಿಯಗೆ ಅವಮಾನವಾದೀತು. ಇವರು ಶ್ವಾನಮತ್ತರು. ಇವರು ಇರುವಂತಹ ಏರಿಯಾಗಳಲ್ಲಿ ಬೀದಿನಾಯಿಗಳು ಕಾಣಸಿಗುವುದೇ ಅಪರೂಪ. ಇನ್ನು ಕೊಳಗೇರಿಗಳ, ಬೇರೆ ಏರಿಯಾಗಳ ವಿಷಯ ಬಿಡಿ, ಅದು ಬೇರೆ ವಿಷಯ. ಇದು ಒಂಥರಾ ಎಲ್ಲಾ ಸಂಗತಿಗಳಲ್ಲೂ ನಮ್ಮಲ್ಲಿ ಕಂಡು ಬರುತ್ತೆ. ನಮ್ಮ ಮನೆ ಶುಚಿಯಾಗಿರಬೇಕು. ರಸ್ತೆಯಿರುವುದೇ ಕಸ ಹಾಕಲು, ಹೊಲಸು ಮಾಡಲು. ಅಲ್ಲವೇ? ಇನ್ನು ಚ್ಯೂಯಿಂಗ್ ಗಮ್ ತಿಂದು ಎಲ್ಲೆಂದೆರಲ್ಲಿ ಉಗಿಯುವವರು ಬೇರೆ. ಅವರೆಲ್ಲಾ ಹಾಗಿರಲಿ. ಇಂತಹ ಶ್ವಾನಮತ್ತರಿಗೆ ಏನು ಮಾಡಬೇಕು? ಇವತ್ತಿಗೆ ಇಷ್ಟು ರಗಳೆ ಸಾಕು. ಪ್ರಿಯ ದಾರಿಹೋಕರೇ, ನಿಮ್ಮ ಪಾದ ಪಾವನವಾಗದಂತೆ ಎಚ್ಚರ ವಹಿಸಿ.

ಇಂತೀ ನಿಮ್ಮ ಪ್ರೀತಿಯ,
ದಾರಿಹೋಕ


ಪ್ರಲೇಖ

©2009 Pradeep Hegde. All rights reserved.