ದಾರಿಹೋಕನ ರಗಳೆಗಳು:: ಶ್ವಾನಮತ್ತ ನಾಗರೀಕರು

:ದಾರಿಹೋಕನ ರಗಳೆಗಳು::ರಗಳೆ-೨::

ಅರೆರೆ! ಇದೇನಪ್ಪಾ… ಒಮ್ಮೆ ಕೆರೆ ಗಿರೆ ಅಂತ ಏನೆಲ್ಲಾ ಒದರಿ ಹೋದ ದಾರಿಹೋಕ ನಿದ್ದೆಯಿಂದೆದ್ದನೇ ಅಂದುಕೊಂಡಿರಾ… ಹಾಗೇನಿಲ್ಲ. ಇಲ್ಲಿ ನಿದ್ದೆ ಮಾಡೋರು ಬಹಳಷ್ಟು ಮಂದಿ ಇದಾರೆ. ದೊಡ್ಡದಾದ ಊರಲ್ಲಿ ದಾರಿಹೋಕರಿಗೇನು ಕಮ್ಮಿಯೇ? ರಸ್ತೆಗಿಳಿದರೆ ಸಿಗುವರೇ ವಿವಿಧ ಬಗೆಯ ದಾರಿಹೋಕರು. ಆಹಾ! ಎಷ್ಟೊಂದು ವಿಧ! ಇವರಲ್ಲಿ ಒಂದು ವಿಧದ ಬಗ್ಗೆ ಇವತ್ತು ನಿಮ್ಮ ತಲೆ ತಿನ್ನಲು ಬಯಸುತ್ತೇನೆ. ಇವರು ಒಂಥರಾ ಅಂತಸ್ತು ಹುಚ್ಚು (“status craze”) ಇರೋ ವಿಧಕ್ಕೆ ಸೇರುತ್ತಾರೆ ನೋಡಿ. ಇವರಲ್ಲಿ ಕೆಲವರು ಶ್ವಾನ ಪ್ರೇಮಿಗಳೂ ಆಗಿರಬಹುದು. ಆದರೆ ಮೊದಲನೇ ವಿಧವೇ ಹೆಚ್ಚೆನಿಸುತ್ತದೆ. ಈಗಾಗಲೇ ಇದೇನು ರಗಳೆ ಅಂತ ಹೊಳೆದಿರಬೇಕು ನಿಮಗೆ. ಪೀಠಿಕೆ ಸಾಕು. ನೇರವಾಗಿ ವಿಷಯಕ್ಕೆ ಬರೋಣ. (ಕ್ಷಮಿಸಿ, ಅಷ್ಟೊಂದು ನೇರವಾಗಿ ಅಲ್ಲ..)

::ಶ್ವಾನಮತ್ತ ನಾಗರೀಕರು::
ಬೆಂಗಳೂರಿನಲ್ಲಿ ಅಂದು ಧಾರಾಕಾರ ಮಳೆ. ಎಲ್ಲೆಲ್ಲೂ ಉಕ್ಕಿ ಹರಿಯುವ ನೀರು. ಚರಂಡಿಯಲ್ಲಿ ಮಾತ್ರವಲ್ಲ ಸ್ವಾಮಿ, ದಾರಿಯಲ್ಲೂ. ಈ ಮಳೆನೀರು ನೆಲ ಮುಟ್ಟುವಾಗ ಎಷ್ಟು ಶುದ್ಧವಾಗಿರುವುದೋ* (*ವಾಯುಮಂಡಲದಿಂದ ಮಲಿನಗೊಂಡಿರದಿದ್ದಲ್ಲಿ) ನೆಲಕ್ಕಪ್ಪಳಿಸಿದಂತೆಯೇ ನೆಲದ ಎಲ್ಲಾ ಅಂಶಗಳನ್ನೂ ತನ್ನೊಡನೆ ಕರೆದುಕೊಂಡು ಹರಿಯತೊಡಗುತ್ತೆ. ನೀರು ಒಂಥರಾ ನಿಜವಾದ ಜಾತ್ಯಾತೀತವಾದಿ ನೋಡಿ. ಅದಕ್ಕೆ ಭೇದ ಭಾವ ತಿಳಿಯದು… ನೀನು ಮಣ್ಣು, ನೀನು ಮರಳು, ನೀನು ಕಸ, ನೀನು ಕಡ್ಡಿ, ನೀನು ನಾಯಿ ಹೇಲು… ಅಂತೆಲ್ಲಾ ಹೇಳಿ ತನ್ನೊಡನೆ ಕರೆದೊಯ್ಯದೇ ಇರದು. ರಸ್ತೆಯಲ್ಲಿ ನಡೆದಾಡುವಾಗ ಈ ನೀರಲ್ಲಿ ನಮ್ಮ ಪಾದಗಳ/ಪಾದುಕೆಗಳ ಪಾವನ ಮಾಡಿಸದೇ ಹೋಗುವಂತಿಲ್ಲ. ಮಣ್ಣು, ಕಸ, ಕಡ್ಡಿ ಯೆಲ್ಲಾ ಓಕೆ! ಆದರೆ, ನೀರಲ್ಲಿ ಅರ್ಧ ಕರಡಿದ ನಾಯಿ ಹೇಲು ಬೇಕೇ?! ….

ನಿಮ್ಮ ವಾಂತಿ ಮಾಡುವ ಕಾರ್ಯ ಮುಗಿದಲ್ಲಿ ಮುಂದೆ ಓದಿ….

ಇನ್ನೂ ಬಂದಂತನಿಸುತ್ತಿದೆಯೇ? ನೀವು ಶೀಘ್ರ ವಾಂತಿ ಬರುವವರಾದಲ್ಲಿ ಮುಂದೆ ಓದಬೇಡಿ. ಮನಸ್ಸು ಹಗುರಾಗಿಸಲು ಪ್ರಕವಿಯ ವಲಯಕ್ಕೆ ಭೇಟಿ ನೀಡಿ. ಇಲ್ಲವಾದಲ್ಲಿ ಮುಂದುವರೆಸಿ….

ಹೇಲುತ್ತಿರುವ ನಾಯಿ

ಹೇಲುತ್ತಿರುವ ನಾಯಿ

ಹೇಸಿಗೆಯೆನಿಸಿತೇ? ಅನಿಸದೇ ಇರದು. ಇದನ್ನು ಅಕ್ಷರ ರೂಪದಲ್ಲಿ ಓದಿದಾಗಲೇ ಹೀಗಾದಲ್ಲಿ, ಇನ್ನು ಇದನ್ನು ಕಣ್ಣಾರೆ ಕಾಣುವ (ಅದೃಷ್ಟ ನೆಟ್ಟಗಿರದಿದ್ದಲ್ಲಿ ಇದನ್ನು ಮೆಟ್ಟುವ) ನಮ್ಮಂತಹ ದಾರಿಹೋಕರಿಗಾಗುವ ಪಾಡೇನೆಂದು ಅರ್ಥವಾಗಿರಬೇಕು. “ಸ್ವಚ್ಛ ಬೆಂಗಳೂರು” ಎಂದೆಲ್ಲಾ ಗೋಡೆಗಳನ್ನೆಲ್ಲಾ ಅಂದಗೊಳಿಸುತ್ತಿರುವ ಬಿ.ಬಿ.ಎಂ.ಪಿ ಯವರ ಪಾದವಿನ್ನೂ ಈ ನೀರಿನಲ್ಲಿ ಪಾವನವಾದಂತಿಲ್ಲ. ಬಣ್ಣ ಬಣ್ಣದ ಚಿತ್ರ ಬಿಡಿಸಿ ಕಣ್ಣುಗಳನ್ನು ಮೂರ್ಖರನ್ನಗಿಸಬಹುದೇ ಹೊರತು, ಮೂಗನ್ನಲ್ಲ, ಪಾದುಕೆಗಳನ್ನಲ್ಲ. ಯಾಕ್ರೀ, ನಾಯಿ ಹೇಲೊಂದೇ ಪಾವಗೊಳಿಸುತ್ತೆಯೇ ಹರಿವ ನೀರನ್ನು? ಎಲ್ಲೆಂದರೆಲ್ಲಿ ಮಾಡಿದ ಉಚ್ಚಿಯೇನು ನೀರಲ್ಲಿ ಬೆರೆಯದೇ, ಎಂದೆಲ್ಲಾ “ಶ್ವಾನ ಪ್ರಿಯರು” ಈ ಕ್ಷಣವೇ ಸವಾಲೆಸೆಯಲು ಹಲ್ಲು ಮಸೆಯುತ್ತಿರುತ್ತಾರೆ. ಅದು ಬೇರೆ ವಿಷಯ ಬಿಡಿ. ಹಣ ಪಾವತಿಸಿ ಯಾವ ಮುಠ್ಠಾಳ ಉಚ್ಚಿ ಮಾಡುವನು? ಉಚ್ಚಿ ಮಾಡಲೂ ತೆರಿಗೆಯೇ? ಅದರ ಬದಲು, ಉಚಿತ ಮೂತ್ರಾಲಯಗಳ ತೆರೆದರೆ ನಿಜವಾದ ಉಪಕಾರವಾಗುವುದು ನಾಗರೀಕ ಸಮಾಜಕ್ಕೆ. ಇದು ಬೇರೆ ರಗಳೆ ಬಿಡಿ, ಈ ಬಗ್ಗೆ ಮುಂದಿನ ಸಾರಿ ತಲೆ ತಿನ್ನೋಣ. ಸಧ್ಯ ನಾಯಿ ಹೇಲಿಗೆ ವಾಪಸ್ಸು ಬರೋಣ…

ಇದು ಶ್ವಾನಪ್ರಿರಿರುವ ಬಹುತೇಕ ಎಲ್ಲಾ ವಲಯಗಳಲ್ಲೂ ದಾರಿಯಲ್ಲಿ ಬೆಳಬೆಳಗ್ಗೆ ಕೆಲಸಕ್ಕೆ ಹೊರಟಾಗ ಶುಭೋದಯ ಹೇಳಲು, ಸಂಜೆ ಹಿಂತಿರುಗಿ ಬಂದಾಗ ನಿಮ್ಮ ಪಾದಗಳ ಮುತ್ತಿಕ್ಕಿ ಸ್ವಾಗತಿಸಲು ಪ್ರೀತಿಯಿಂದ ನೀವು ಬರುವ ದಾರಿ ನೋಡುತ್ತಿರುತ್ತವೆ. ಇಲ್ಲವಾದಲ್ಲಿ, ವಿವಿಧ ಆಕಾರಗಳ, ವಿವಿಧ ಬಗೆಯ ನಾಯಿಗಳ ಪಟ್ಟಿ ಹಿಡಿದು ಅದಕ್ಕೆ “ವಾಕಿಂಗ್” ಮಾಡಲು ಕರೆತಂದಿರುವ ಮಹನೀಯ ದಾರಿಹೋಕರು ಕಾಣಸಿಗುತ್ತಾರೆ. ಅದೆಂತಹಾ ನಾಯಿಗಳೋ… ದೈತ್ಯಾಕಾರದ ನಾಯಿಗಳು, ಭೂತಾಕಾರದ ನಾಯಿಗಳು, ಇಲಿಯಾಕಾರದ ನಾಯಿಗಳು, ಮತ್ತು “ಮಿನಿ”, “ಮೈಕ್ರೋ” ನಾಯಿಗಳೂ ಸಹ! ದೈತ್ಯಾಕಾರದ ನಾಯಿಗಳು! ಮನಸ್ಸು ಮಾಡಿದರೆ ತಮ್ಮ ಶ್ವಾನಪ್ರಿಯನನ್ನು ಬೇಕೆಂದಲ್ಲಿ ಸಲೀಸಾಗಿ ಎಳೆದುಕೊಂಡು ಹೋಗುವಂತಿರುತ್ತವೆ. ಅವುಗಳ ಆಕಾರದಂತೆಯೇ ಅವುಗಳ ಹೇಲುಗಳೂ ಬೃಹದಾಕಾರದ ಹೇಲುಗಳು. (ಆದರೆ ಮಧ್ಯಮ, ಚಿಕ್ಕ ನಾಯಿಗಳ ಹೇಲೇನು ಬಹಳ ಕಮ್ಮಿಯಿರುವುದಿಲ್ಲ.) ಈ ನಾಯಿಗಳು ನಮ್ಮೂರಿನ ತಿರುಬೋಕಿ ನಾಯಿಗಳಂತಲ್ಲ ಸ್ವಾಮಿ, ಇವೇನು ಸಾಮಾನ್ಯ ಕಂತ್ರಿ ಕಜ್ಜಿ ನಾಯಿಗಳಾ? ಅಲ್ವೇ ಅಲ್ಲ! ನಿಲ್ಲು ಅಂದರೆ ನಿಲ್ಲುತ್ತವೆ, ಕೂರು ಅಂದ್ರೆ ಕೂರುತ್ತವೆ, ಆಡು ಅಂದರೆ ಆಡುತ್ತವೆ, ಮಲಗು ಅಂದರೆ ಮಲಗುತ್ತವೆ, ದಾರಿಯಲ್ಲಿ ಹೇಲು ಅಂದರೆ ಹೇಲುತ್ತವೆ. ಎಲಾ ಇವರಾ! ಎಷ್ಟೊಂದು ವಿಧೇಯ ಕುನ್ನಿಗಳು ನೋಡಿ. ಇವುಗಳು ಬೀದಿಯಲ್ಲಿ ಹೊರಳಾಡುವುದಿಲ್ಲ, ಎಲ್ಲೆಂದರಲ್ಲಿ ಮಲಗುವುದಿಲ್ಲ, ಸಿಕ್ಕಸಿಕ್ಕಿದುದೇನನ್ನೂ ತಿನ್ನುವುದಿಲ್ಲ. ಇವುಗಳು ದಿನವಿಡೀ ಮನೆಯೊಳಗೇ ಹಾಯಾಗಿ ಓಡಾಡಿಕೊಂಡು, ಶುಚಿಯಾಗಿರುವ ನೆಲದ ಮೇಲೆಯೇ ಹೊರಳಾಡಿಕೊಂಡು, ಪೆಡಿಗ್ರಿಯನ್ನೇ ಬಕಾಸುರನಂತೆ ತಿಂದುಕೊಂಡಿರುತ್ತವೆ. ಇವುಗಳು ಸಾಮಾನ್ಯ ಶ್ವಾನ ಪ್ರಜೆಗಳಲ್ಲ ಸ್ವಾಮೀ, “aristocratic” ಶ್ವಾನ ಪ್ರಜೆಗಳು. ಎಲ್ಲವೂ ಶುಚಿಯಾಗಿರಬೇಕು ಇವುಗಳಿಗೆ. ಆದರೆ ಹೇಲಲು ಸಾರ್ವಜನಿಕ ರಸ್ತೆಯೇ ಬೇಕು. ಇಲ್ಲವಾದಲ್ಲಿ, ಕಾಲುದಾರಿಯೇ* (*ಪ್ರೀತಿಯ ಕಂಗ್ಲೀಷ್ ಬಾಂಧವರೇ, ಕಾಲುದರಿಯೆಂದರೆ footpath) ಬೇಕು. ಆ ನಾಯಿಯ ಊಟ, ತಿಂಡಿ, ಸ್ನಾನ, ಓಡಾಟ, ಒಡನಾಟ ಎಲ್ಲಾ ಮನೆಯೊಳಗೆ. ಹೇತುಹಾಕೋ ಕೆಲಸವೊಂದು ಮಾತ್ರ ದಾರಿಯಲ್ಲಿ. ಭಲೇ ಕುನ್ನಿಗಳೇ ಇವುಗಳು! ಆದರೆ, ನಿಜವಾಗಿ ಹೇಳಬೇಕೆಂದರೆ, ಇದರಲ್ಲಿ ಆ ನಾಯಿಗಳ ತಪ್ಪಿಲ್ಲ. ಅಂತಹ ಶ್ವಾನಗಳು ಯಾವ ರೀತಿ ಜೀವಿಸುತ್ತದೆ? ಅದಕ್ಕೆ ಸ್ವಾತಂತ್ರವಿದೆಯೇ? ಯಾವತ್ತೂ ಕುತ್ತಿಗುಗೆ ಪಟ್ಟಿ, ಹುಟ್ಟಿನಿಂದ ಸಾವಿನವರೆಗೂ ಗೃಹ ಬಂಧನ. ಇದು ಯಾಕೆ ಪ್ರಾಣಿ ಹಿಂಸೆಯೆಂದು ಪರಿಗಣಿಸಲ್ಪದುವುದಿಲ್ಲ? ಪ್ರಾಣಿ ಹಿಂಸೆ ಹಾಗಿರಲಿ, ಈಗ ದಾರಿಹೋಕ ಹಿಂಸೆಗೆ ಬರೋಣ. ನಾಯಿ ಹೇಲು ಎಲ್ಲಿದೆಯೋ ಎಂದು ಹುಡುಕುತ್ತಾ ಓಡಾಡುವ ಸಾಹಸ ಯಾವತ್ತೂ ದ್ವಿಚಕ್ರ/ತ್ರಿಚಕ್ರ/ಚತುರ್ಚಕ್ರ ವಾಹನಗಳಲ್ಲೆ ಓಡಾಡುವ ಶ್ವಾನಪ್ರಿಯರಿಗೆಲ್ಲಿ ತಿಳಿದಿದೆ? ಕುರುಡು ಬಿ.ಬಿ.ಎಂ.ಪಿ ಯವರನ್ನು ಮರೆತುಬಿಡಿ, ತಮ್ಮ ನಾಯಿಯನ್ನು ದಾರಿಯಲ್ಲಿ ಹೇಲು ಹಾಕಿಸುವರನ್ನು ಹಿಡಿದು ೫೦೦ ರೂಪಾಯಿ ದಂಡ ಹಾಕಿದರೆ, ಓಳ್ಳೆಯ ಹಣ ಗಳಿಸಬಹುದಿತ್ತು ಅವರಿಗೆ. ಇಂತಹ ಶ್ವಾನಪ್ರಿಯರಿಗೆ, ನಾಲ್ಕೈದು ನಾಯಿಗಳನ್ನು ತಂದು ಅವರ ಬಾಗಿಲ ಎದುರೇ ಆ ನಾಯಿಗಳು ಹೇತು ಹಾಕುವಂತೆ ಮಾಡಬೇಕು, ಬುದ್ಧಿ ಬರಲು. ಮಂಗನ ಕೈಯಲ್ಲಿ ಮಾಣಿಕ್ಯವೆಂಬ ಗಾದೆ ಹಳತಾಯಿತು. “ಕೋತಿಯ ಕೈಯ್ಯಲ್ಲಿ ನಾಯಿ” ಎಂಬುದು ಹೊಸತು… ದುರದೃಷ್ಟಕ್ಕೆ, ಈ ಶ್ವಾನಮತ್ತ ನಾಗರೀಕರು (ಅನಾಗರೀಕರೆಂದರೆ ಹೆಚ್ಚು ಅರ್ಥಪೂರ್ಣ. ಅಲ್ವಾ..) ಈಚೆಗೆ ಜಾಸ್ತಿಯಾದಂತೆ ತೋರುತ್ತಿದ್ದಾರೆ. ಇವರ ಸಂಖ್ಯೆ ಹೀಗೆಯೇ ಹೆಚ್ಚುತ್ತಿದ್ದರೆ ಮುಂದೊಂದು ದಿನ ರಸ್ತೆಗೆ ಡಾಂಬರ್ ಹಾಕೋ ಅಗತ್ಯವೇ ಇರುವುದಿಲ್ಲ. ಜಲ್ಲಿಯಲ್ಲಿ ಮಿಶ್ರಿತ ನಾಯಿಹೇಲಿನ ಮೇಲೆಯೇ ರೋಡ್ ರೋಲರ್ ಓಡಿಸಿದರೆ ರಸ್ತೆ ಸಿದ್ಧ! ಡಾಂಬರ್ ಹಾಕಿ ಅದೇನು ಸಾಧಿಸಿದಂತಾಗುವುದು? ಹೇಗೂ ರಸ್ತೆ ನಾಯಿ ಹೇಲಲ್ಲೇ ಮುಳುಗುವುದು ತಾನೆ… ಅಲ್ಲ, ಅದ್ಯಾವ ಪುರುಶಾರ್ಥಕ್ಕಾಗಿ ಈ ಥರದ ನಾಯಿ ಸಾಕಣೆ? ರಸ್ತೆಯೆಲ್ಲ ನಾಯಿ ಹೇಲಿನ ಗೊಬ್ಬರ ಉತ್ಪಾದನೆ ಕೇಂದ್ರವನ್ನಾಗಿಸಲೇ? ನಮ್ಮಂತಹ ಬಡ ದಾರಿಹೋಕರ ಪಾದುಕೆಗಳ ಪಾವನಗೊಳಿಸಲೇ?

ನಂಗೊತ್ತಿಲ್ಲಪ್ಪಾ.....

ನಂಗೊತ್ತಿಲ್ಲಪ್ಪಾ…..

ಇಲ್ಲಿಯವರೆಗೆ ಓದಿದಾಕ್ಷಣ, ನಮ್ಮನ್ನೇ ಏಕೆ ದೂರುತ್ತೀರ? ಯಾವುದೋ ಬೀದಿನಾಗಳ ಕೃತ್ಯವನ್ನು ನಮ್ಮ ಮುಗ್ಧ ಕುನ್ನಿಯ ಮೇಲೆ ಯಾಕೆ ಹೊರಿಸುತ್ತೀರ? ಎಂದೆಲ್ಲ ಶ್ವಾನಪ್ರಿಯರು ಕೂಗಾಡಲು ಶುರುಹಚ್ಚಿಕೊಳ್ಳುತ್ತಾರೆ. ಶ್ವಾನಪ್ರಿಯರೆಂದರೆ ತಪ್ಪಾದೀತು. ನಿಜವಾದ ಶ್ವಾನಪ್ರಿಯಗೆ ಅವಮಾನವಾದೀತು. ಇವರು ಶ್ವಾನಮತ್ತರು. ಇವರು ಇರುವಂತಹ ಏರಿಯಾಗಳಲ್ಲಿ ಬೀದಿನಾಯಿಗಳು ಕಾಣಸಿಗುವುದೇ ಅಪರೂಪ. ಇನ್ನು ಕೊಳಗೇರಿಗಳ, ಬೇರೆ ಏರಿಯಾಗಳ ವಿಷಯ ಬಿಡಿ, ಅದು ಬೇರೆ ವಿಷಯ. ಇದು ಒಂಥರಾ ಎಲ್ಲಾ ಸಂಗತಿಗಳಲ್ಲೂ ನಮ್ಮಲ್ಲಿ ಕಂಡು ಬರುತ್ತೆ. ನಮ್ಮ ಮನೆ ಶುಚಿಯಾಗಿರಬೇಕು. ರಸ್ತೆಯಿರುವುದೇ ಕಸ ಹಾಕಲು, ಹೊಲಸು ಮಾಡಲು. ಅಲ್ಲವೇ? ಇನ್ನು ಚ್ಯೂಯಿಂಗ್ ಗಮ್ ತಿಂದು ಎಲ್ಲೆಂದೆರಲ್ಲಿ ಉಗಿಯುವವರು ಬೇರೆ. ಅವರೆಲ್ಲಾ ಹಾಗಿರಲಿ. ಇಂತಹ ಶ್ವಾನಮತ್ತರಿಗೆ ಏನು ಮಾಡಬೇಕು? ಇವತ್ತಿಗೆ ಇಷ್ಟು ರಗಳೆ ಸಾಕು. ಪ್ರಿಯ ದಾರಿಹೋಕರೇ, ನಿಮ್ಮ ಪಾದ ಪಾವನವಾಗದಂತೆ ಎಚ್ಚರ ವಹಿಸಿ.

ಇಂತೀ ನಿಮ್ಮ ಪ್ರೀತಿಯ,
ದಾರಿಹೋಕ


ಪ್ರಲೇಖ

©2009 Pradeep Hegde. All rights reserved.

ದಾರಿಹೋಕನ ರಗಳೆಗಳು…

::ಪರಿಚಯ::
ನಾನ್ಯಾರೆಂದು ನಿಮಗೆಲ್ಲಾ ಗೊತ್ತಲ್ಲವೇ.. ಪ್ರತಿನಿತ್ಯ, ಪ್ರತಿಕ್ಷಣ ಹೊಸ ರೂಪ ತಾಳಿ ನಿಮ್ಮ ಹಾದಿಯಲ್ಲಿ ಹಾದು ಹೋಗುತ್ತಿರುತ್ತೇನೆ.. ನನ್ನ ಗುರುತು ಸಿಗಲಿಲ್ಲವೇ? ಅಯ್ಯೋ!! , ದಿನಾ ನೋಡೋರನ್ನೇ ಪರಿಚಯವಿಲ್ಲಾ ಎಂದರೆ ಹೇಗೆ ಕಣ್ರೀ?! ನಾನೇ, ದಿನನಿತ್ಯ ನಿಮ್ಮ ಹಾದಿಯಲಿ ಹಾದು ಹೋಗುವ ದಾರಿಹೋಕ. ಇಷ್ಟು ಸಾಕಲ್ಲವೇ, ಪರಿಚಯಕ್ಕೆ! ಬನ್ನಿ ನೊಡೋಣ. ದಾರಿಯಲ್ಲಿ ದಿನನಿತ್ಯ ಕಾಣಸಿಗುವ ಸ್ವಾರಸ್ಯಗಳು, ಸಂಗತಿಗಳು, ಮನುಷ್ಯರು, ಪ್ರಾಣಿಗಳು… ಹಾಗೂ ಪಕ್ಷಿಗಳು.. (ಚಿಟ್ಟೆಗಳೂ ಸಹ!!) ನಿಮ್ಮ ನೆಚ್ಚಿನ ದಾರಿಹೋಕನ ನೋಟದಲ್ಲಿ.

ಕೆರೆ ಪುರಾಣ

ಕೆರೆ ಪುರಾಣ

::ಇಂದಿನ ರಗಳೆ::
ನಮ್ಮ “ಏರಿಯಾ” ಕೆರೆಯ ದಂಡೆಯಲ್ಲಿ ಭಾಸ್ಕರ ಮುಳುಗುವ, ಹಾಗೂ ಬೇಸರ ಮೂಡುವ ಸಮಯ ಸುಮ್ಮನೆ ಹೋಗಿ ಕೂರುವ ಜಾಯಮಾನ ನಮ್ಮದು. ಎಷ್ಟಾದರೂ ಕಡಲ ತೀರದವರಲ್ಲವೇ, ನೀರ ಬುಡದಲ್ಲಿ ಕುಳಿತರೇ ಮನಸ್ಸಿಗೆ ಒಂಥರಾ ನೆಮ್ಮದಿ ನೋಡಿ. (ಹಾಗಂತ ಬಚ್ಚಲಿ ಮನೆಯಲ್ಲಿ ಬಾಲ್ದಿಯ ಬುಡದಲ್ಲಿ ಕೂರ್ತೀವಿ ಅಂತಲ್ಲ!) ಈ ಬೆಂದಕಾಳ ಊರಿನಲ್ಲಿ ನೊಂದು, ಬೆಂದು ಚಿಂದಿ ಚಿತ್ರಾನ್ನವಾದ ಮೆದುಳನ್ನು ಚೂರು ಸಂತೈಸಲೆಂದು ಕೆರೆಯ ದಡಕ್ಕೆ ಪ್ರಯಾಣ. ಇಲ್ಲಿ ನದಿಯಂತು ಇಲ್ಲ. ಸಮುದ್ರವಂತು ಇಲ್ಲವೇ ಇಲ್ಲ. (ಆದರೂ ಮಳೆಗಾಲದಲ್ಲಿ ಚರಂಡಿ ಪ್ರವಾಹ ತಪ್ಪಿದ್ದಲ್ಲ!) ಏನೋ ನಮ್ಮಜ್ಜೀ ಪುಣ್ಯ, ಪಕ್ಕದಲ್ಲೊಂದು ಕೆರೆಯಾದರೂ ಉಳಿದುಕೊಂದಿದೆ. ಕೆರೆಯ ವಿಷಯಕ್ಕೆ ಬಂದ್ರೆ, ನಮ್ಮ ಮೆಜೆಸ್ಟಿಕ್… ಕ್ಷಮಿಸಿ, ನಮ್ಮ ಕೆಂ. ಬಸ್ ನಿಲ್ದಾಣವಿರುವ ಜಾಗ ಮೊದಲು ಯಾವುದೋ ಕಾಲದಲ್ಲಿ ಕೆರೆಯಾಗಿತ್ತಂತೆ. ಈಗ ಸುತ್ತಮುತ್ತಲಿನ ಕೆರೆಗಳು ಬತ್ತುತ್ತಿವೆ. ಹಾಗಾಗದಿದ್ದಲ್ಲಿ, ಭೂ ಕಬಳಿಕೆಯಂತೆ, ಕೆರೆ ಕಬಳಿಕೆಯೂ ನಡೆದಿದೆಯೆಂದರೆ ಸುಳ್ಳಾಗದು.

ಅದೆಲ್ಲಾ ಆಮೇಲೆ ಇರಲಿ. ಈಗ ನಮ್ಮ ಕೆರೆಗೆ ಬರೋಣ. ಯಾವ ಕೆರೆಯೆಂದು ಕೇಳಬೇಡಿ. ಸುತ್ತಲೂ “ಜಾಗಿಂಗ್” ಮಾಡಲೆಂದು ಇತ್ತೀಚೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಆವರಣದ ಹೊರಗಡೆ ಕಾರುಗಳ ಸಾಲು. ನಮ್ಮ ಜನರೆಷ್ಟು ಬುದ್ಧಿವಂತರೆಂದರೆ, ಕಾರಿನಲ್ಲಿ ಆರಾಮವಾಗಿ ಬಂದು ಬದಿಯಲ್ಲಿ ನಿಲ್ಲಿಸಿ ಹೊರಡುತ್ತಾರೆ, “ಜಾಗಿಂಗ್”, “ವಾಕಿಂಗ್” ಮಾಡಲು. ಇವರು, ಓಡಾಟ, ನಡೆದಾಟವೆಲ್ಲಾ ಮಾಡಲ್ಲ. ಎಲ್ಲಿ ತಮ್ಮ ಪ್ರತಿಷ್ಟೆ ಕಮ್ಮಿಯಾಗಿಬಿಟ್ಟರೆ?! “ಜಾಗಿಂಗ್”, “ವಾಕಿಂಗೇ” ಮಾಡ್ಬೇಕು. ಭಲೇ ಚತುರರೇ ಕಣ್ರೀ ಇವರು. “ವಾಕಿಂಗ್” ಮಾಡಲೆಂದು ನಡೆದುಕೊಂದು ಬರುವುದು ಎಲ್ಲಾದರೂ ಉಂಟೇ?! ನಡೆದುಕೊಂಡು ಬಂದರೆ, ಇಲ್ಲಿ ಬಂದುದು ವ್ಯರ್ಥವಲ್ಲವೇ… ನಡೆದಾದ ಮೇಲೆ ಇಲ್ಲಿ ಕೆರೆಯ ದಡದಲ್ಲಿ ಮತ್ತೇನು ಕೆಲಸ? ಹಾಗಾಗಿ, ತಮ್ಮ “ಉನ್ನತ” ತರ್ಕದ ಪ್ರಕಾರ ವಾಹನದಲ್ಲೇ ಆಗಮಿಸಿ, ಇಲ್ಲಿ ನಡೆದಾಡಿ, ಓಡಾಡಿ… ಕ್ಷಮಿಸಿ, “ವಾಕಿಂಗ್” ಮಾಡಿ, “ಜಾಗಿಂಗ್” ಮಾಡಿ, ದೇಹಕ್ಕೆ ವ್ಯಾಯಾಮವೊದಗಿಸಿ… ಕ್ಷಮಿಸಿ, ಕ್ಷಮಿಸಿ.. “ಎಕ್ಸರ್ಸೈಸ್” ಒದಗಿಸಿ, ತಮ್ಮ ವಾಹನದಲ್ಲೇ ತೆರಳುವರು. ನಮ್ಮ ಹಾಗೆ ನಡೆದಾಡಿಕೊಂಡು ಬಂದು ಇಲ್ಲಿ ಕುಳಿತುಕೊಳ್ಳುವ ದಾರಿಹೋಕರಿಗೆಲ್ಲಿ ಅಷ್ಟು ಬುದ್ಧಿ, ಬಿಡಿ.


ಇನ್ನೊಂದು ತರಹದ “ಸ್ಯಾಂಪಲ್” ಗಳೆಂದರೆ, “ಇಲ್ಲಿ ತಮ್ಮ ಪ್ರೇಮವನ್ನು ಪ್ರದರ್ಶಿಸಬೇಡಿ”, “ನಿಮ್ಮ ವರ್ತನೆಯಿಂದ ಇತರರಿಗೆ ಮುಜುಗುರವುಂಟುಮಾಡಬೇಡಿ” ಎಂದು ಬರೆದಿರುವ ಆಸನಗಳ ಮೇಲೆ ರಾರಾಜಿಸುವ ಜೋಡಿಗಳು. ಸಿನಿಮಾದವರು ಇವರನ್ನು ನೋಡಿ ಕೆಟ್ಟರೋ, ಇವರು ಸಿನಿಮಾ ನೋಡಿ ಕೆಟ್ಟರೋ ತಿಳಿಯದು. ಇವರನ್ನು ಬಿಟ್ಟರೆ, ಇಲ್ಲಿ ವಿಧ ವಿಧದ ಜನರ ಸಂತೆ. ಮತ್ತವರವರ ಅಂತೆ-ಕಂತೆ. ನಡೆಯಲು, ಓಡಾಡಲು ಬರುವ “ಚಿಟ್ಟೆ”ಗಳು, “ಜಿಂಕೆಮರಿ”ಗಳು (ಇಲ್ಲಾ ಸ್ವಾಮಿ, ಮೃಗಾಲದ ಸಂಗತಿಗಿನ್ನೂ ಬಂದಿಲ್ಲ, ಕೆರೆಯ ಬುಡದಲ್ಲೇ ಇರುವೆ…) “ಚಿಟ್ಟೆ”ಗಳನ್ನು ಹಂಬಲಿಸಿ ಬಂದ “ದುಂಬಿ”ಗಳು, “ಜಿಂಕೆಮರಿ”ಗಳನ್ನು ಹಿಂಬಾಲಿಸುವ “ತೋಳ”ಗಳು, ಎಲ್ಲಿ ದಪ್ಪವಾಗಿಬಿಟ್ಟೇವೋ ಎಂದು ಹೆದರಿ ಹೆದರಿ ಬರುವ ತೆಳ್ಳಗಿನವರು, ಇಂದು ಮೈಯನ್ನು ಇಳಿಸಲೇಬೇಕೆಂದು ಪಣತೊಟ್ಟು ಬಂದಿರುವ “ಗಜಗಾಮಿನಿ”ಯರು, “ಒಂಟಿಸಲಗಗಳು” (ಅಬ್ಬಾ! ಹೊಟ್ಟೆ ನೋಡಿದರೆ ಏಳೆಂಟು ಹಂದಿಗಳನ್ನು ನುಂಗಿದವರಂತೆ ಕಾಣುವರು!), ಹಾಗೂ “ಹಂದಿಮರಿ”ಗಳು… ಇಂತಹವರ ನಡುವೆ ಸೂರ್ಯ ಕೆಳಗಿಳಿಯುವುದನ್ನು ನೋಡಬರುವ ನಮ್ಮಂತಹಾ ದಾರಿಹೋಕರು. ಇವತ್ತಿಗಿಷ್ಟು ರಗಳೆ ಸಾಕಲ್ಲವೇ. ಮತ್ತೆ ಸಿಗೋಣವಂತೆ…


ಇಂತೀ ನಿಮ್ಮ ಪ್ರೀತಿಯ
ದಾರಿಹೋಕ.

ಪ್ರಲೇಖ
©2009 Pradeep Hegde. All rights reserved.

ಚಿತ್ರ ಕೃಪೆ:
Sankey_tank.jpg By Nvvchar (Own work) [CC-BY-SA-3.0 or GFDL], via Wikimedia Commons

ಒಂದು ದಿನ.. ಎರಡು ಚಿತ್ರ.. “ಜಂಗ್ಲಿ” “ಸಂಕಟ”..!

    ಹೋದ ರವಿವಾರ ನಮ್ಮ ಹಳೆಯ ದಾಖಲೆ ಮುರಿಯುವ ಪ್ರಯತ್ನ ಮಾಡಿದೆವು! ವಿಫಲರಾದೆವು! ಹಳೆಯ ದಾಖಲೆ: ಒಂದು ದಿನದಲ್ಲಿ ಎರಡು ಸಿನಿಮಾ… (ಮನೆಯಲ್ಲಿ ಅಲ್ಲ, ಚಿತ್ರಮಂದಿರದಲ್ಲಿ) “ವೆಂಕಟ ಇನ್ ಸಂಕಟ”ಕ್ಕೆ ನಾನು, “ಜಂಗ್ಲಿ”ಗೆ ಮಿತ್ರ… ಯಾವುದು ನೋಡುವುದು, ಈಗೀಗ ಭೇಟಿಯೇ ಅಪರೂಪ. ಕಾಲೇಜು ದಿನಗಳಲ್ಲಿ ವಾರಕ್ಕೊಂದು ಸಿನಿಮಾ, ಇಲ್ದಿದ್ರೆ, ತಿಂಗಳಿಗೆ ಮೂರಾದರೂ ಇರ್ತಿತ್ತು. ಆ ದಿನಗಳು ಈಗೆಲ್ಲಿ ಬಿಡಿ. ಎಂತೆಂಥಾ ಡಬ್ಬಾ ಚಿತ್ರಗಳ ನೋಡಲೂ ಆಗ ಸಮಯ. ಈಗ ಒಳ್ಳೆಯ ಚಿತ್ರವಿದೆಯೆಂದರೆ, ನೋಡ್ತೀವೋ ಇಲ್ವೋ ಗೊತ್ತಿಲ್ಲ. (ಟೀವಿಯಲ್ಲಿ ನೋಡೋದು ಬೇರೆ ವಿಷಯ. ಇಲ್ಲಿ ಹೇಳ್ತಿರುವುದು ಚಿತ್ರಮಂದಿರದಲ್ಲಿ ಚಲನಚಿತ್ರ ನೋಡೊ ಸಂಗತಿ!)
    ನೀವೇನೇ ಹೇಳಿ, ಚಿತ್ರಮಂದಿರದಲ್ಲಿ ಸಿನಿಮಾ ನೋಡೋ ಮಜಾ ಟೀವಿಯಲ್ಲಿ ಇಲ್ಲ. ಆ ದೊಡ್ಡ ಸಿನಿಮಾಸ್ಕೋಪ್ ಪರದೆಗೂ, ಈ ಚಿಕ್ಕ ಸೀ.ಆರ್.ಟೀ ಮಾನಿಟರ್ ಗೂ ಎಲ್ಲಿಯ ತುಲನೆ? (ಎಲ್.ಸಿ.ಡಿ ಆದ್ರೂ ಅಷ್ಟೇ..) ಸುತ್ತುವರಿ ಧ್ವನಿ ವಿಶೇಷಗಳು (surround sound effects) ಇಲ್ಲದೇ ಮಜಾ ಇಲ್ಲ. ಕಾಲೇಜು ದಿನಗಳಲ್ಲಿ, ಗೋವಿಂದನ “ವಾಹ್.. ತೆರಾ ಕ್ಯಾ ಕೆಹ್ನಾ” ಸುಚಿತ್ರಾ ಚಿತ್ರಮಂದಿರದಲ್ಲಿ ನೋಡಿ ತಲೆ ಕೆಟ್ಟು ಹೋಯ್ತು ನಮಗೆ. (ಅಷ್ಟು ಡಬ್ಬಾ ಚಿತ್ರ ಅದು). ಅಲ್ಲಿಂದ ನಮ್ಮ ಸವಾರಿ ಸೀದಾ ಅಜಯ್ ದೇವಗನ್-ಅಕ್ಷಯ ಖನ್ನಾ “ದೀವಾನ್ಗೀ” ಇರೋ ಸೆಂಟ್ರಲ್ ಗೆ ಹೋಗಿತ್ತು… ಬಿಡಿ, ಹಳೇ ವಿಷಯ…

ವೆಂಕಟ ಇನ್ ಸಂಕಟ

ವೆಂಕಟ ಇನ್ ಸಂಕಟ

   ಅಂದ ಹಾಗೆ, ಹೋದ ರವಿವಾರ, ಹೊರಟೆವು, “ವೆಂಕಟ”ನ ನೊಡಲು. “ಸಂಕಟ” ಪಡಲು! ಚೆನ್ನಾಗಿರುವ ಹಾಸ್ಯ ಚಿತ್ರವೆಂದು, ಡಬ್ಬಾ ಕ್ಲೈಮಾಕ್ಸ್ ಎಂದೂ ಇದ್ದ ವಿಶ್ಲೇಷಣೆ ಓದಿದ್ದೆ. ವಿಶ್ಲೇಷಕನ್ನ ಹಿಡಿದು ಒದೆಯಬೇಕೆಂದೆನಿಸಿತು, “ಸಂಕಟ”ಪಟ್ಟ ಮೇಲೆ. ಅಂತೂ ಡಬ್ಬಾ ಕ್ಲೈಮಾಕ್ಸ್ ಅನ್ನೋ ಸತ್ಯ ಹೇಳಿದ್ನಲ್ಲಾ, ಬಿಡಿ… ಅಭಿನಯದಲ್ಲೇನೂ ಕಡಿಮೆಯಿಲ್ಲ. ರಮೇಶ್, ಉಮಾಶ್ರೀ, ಮು.ಮ ಚಂದ್ರು, ಕರಿಬಸವಯ್ಯ….. ಅಭಿನಯವೆಲ್ಲಾ ಚೆನ್ನಾಗಿತ್ತು, ಉಮೇಶ್ ಅವರ ಅಜ್ಜಿ ಪಾತ್ರ ನಿಜಕ್ಕೂ ಸೂಪರ್! ಆದರೆ, ಹೆಚ್ಚಿನದು ಮೊದಲು ಕೇಳಿದ್ದ/ನೋಡಿದ್ದ ಹಾಸ್ಯವೇ ಆಪರೇಶನ್ ಮಾಡಿಸಿಕೊಂಡು ಹೊಸ ರೂಪ ತಾಳಿ ಬಂದಾಗ ಕಿರಿಕಿರಿಯಾಯಿತು. ಮೋಟಾರ್ ಬೈಕು ವೇಗವರ್ಧಕ (accelerator) ಇಲ್ಲದೇ ಹೇಗೆ ಓಡ್ತಾ ಇತ್ತು ಎಂದು ನಮಗೆ ಇನ್ನೂ ಯಕ್ಷಪ್ರಶ್ನೆಯಾಗೇ ಉಳಿದಿದೆ! ಏನೇ ಆದರೂ, ರಮೇಶ್ ಅವರ ಪ್ರಯತ್ನವನ್ನು ಅಲ್ಲಗೆಳೆಯುವಂತಿಲ್ಲ. ಸ್ವಲ್ಪ ಹಾಸ್ಯದ ಹಾಗೂ ಕ್ಲೈಮಾಕ್ಸ್ ಕಡೆಗೆ ಹೆಚ್ಚು ಧ್ಯಾನ ವಹಿಸಿದ್ದರೆ, ಚಿತ್ರ ಇನ್ನೂ ಚೆನ್ನಾಗಿ ಮೂಡಿ ಬರುತ್ತಿತ್ತು. ಕ್ಲಾಸ್ನಲ್ಲಿ ಕಾಪಿ ಹೊಡೆಯೋ ದೃಶ್ಯ ಮಾತ್ರ ನಮ್ಮನ್ನು ತುಂಬಾ ನಗಿಸಿತ್ತು! ಸಂಭಾಷಣೆಗಳೂ ಚೆನ್ನಾಗಿದ್ದವು. ಆದರೆ, ಹೊಗಳಲಾರ್ಹ ವಿಷಯವೇನೆಂದರೆ, ರಮೇಶ್ ಅವರು ತುಂಬಾ ನವ ಪ್ರತಿಭೆಗಳನ್ನು ಈ ಚಿತದ ಮೂಲಕ ತೆರೆಗೆ ತಂದಿದ್ದು. ಪಲ್ಟಿ ಹೊಡೆಯೋ ಅವಳಿ ಹುಡುಗರು, ಹಾಗೂ ನಾವು ಚಿತ್ರ ಈ ಚಿತ್ರ ನೋಡಲು ಮುಖ್ಯ ಕಾರಣ… ದೇವದಾಸ್ ಕಾಪಿಕಾಡ್! ಟೈಟಲ್ನಲ್ಲಿ ಇವರನ್ನು ಹೊಸಾ ಪ್ರತಿಭೆಯೆಂದು ತೋರಿಸಿದ್ದರೂ, ಇವರು ನಮಗೆ ಹೊಸಾ ಪ್ರತಿಭೆಯೇನೂ ಅಲ್ಲ. ಉಡುಪಿ-ಮಂಗಳೂರಲ್ಲಿ ಯಾರ ಬೇಕಾದರೂ ಕೇಳಿ, “ಭಲೇ ಚಾ ಪರ್ಕ”ದ ಕಾಪಿಕಾಡರು ಯಾರೆಂದು ಹೇಳುತ್ತಾರೆ. ತುಳು ನಾಟಕದ ದೊಡ್ಡ ಹೆಸರು, “ದೇವದಾಸ್ ಕಾಪಿಕಾಡ್”! ಇವರು ನಟಿಸಿರುವ ಮೊದಲ ಕನ್ನಡ ಚಿತ್ರ ನೋಡಲೆಂದೇ ಎಲ್ರೂ ಸೆಂಟ್ರಲ್ಗೆ ಮುಗಿಬೀಳುತ್ತಿದ್ದರು (ನಾವೂ ಸೇರಿದಂತೆ..) ಮಂಗಳೂರಿನ ಸೆಂಟ್ರಲ್ ಚಿತ್ರಮಂದಿರದ “ವೆಂಕಟ..” ಭಿತ್ತಿಪತ್ರಗಳ (ಪೋಸ್ಟರ್ ಗಳ) ನೋಡಿದ್ರೆ, ದೇವದಾಸ್ ಕಾಪಿಕಾಡರೇ ಹೀರೋ ಅಂದ್ಕೋಬೇಕು ನಾವು! ಅದರ ತುಂಬಾ ಅವರದ್ದೇ ಪೋಸುಗಳು! ಚಿತ್ರದಲ್ಲಿ ಅವರೇ ಮುಖ್ಯ ಹಾಸ್ಯಗಾರ, ನಗಿಸುವಲ್ಲಿ ಯಶಸ್ವಿಯಾಗಿದ್ದರೆಯೆನ್ನುವ ಅಗತ್ಯವೇ ಇಲ್ಲ. ಕಾಪಿಕಾಡರು ಇದ್ದಾರೆಂದರೆ, ನಗಲು ಇದೆಯೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ! ಆದರೂ, “ವೆಂಕಟ”ನು “ಸಂಕಟ” ನೀಡಿದನು.. ಚಿತ್ರ ಹೆಚ್ಚು ಖುಷಿಕೊಡಲಿಲ್ಲ… ಕೆಲವು ಹಾಸ್ಯ ದೃಶ್ಯಗಳ ಹೊರತುಪಡಿಸಿ…

ಜಂಗ್ಲಿ

ಜಂಗ್ಲಿ

   ನಮ್ಮ ತಲೆಗೆ ಕಳೆದು ಹೋದ ಚೇತನವನ್ನು ತರಿಸಲೆಂದು ಹೋಟೇಲಿಗೆ ಹೋದೆವು. ಚಹಾ ಹೀರುತ್ತಾ ಗೆಳೆಯ ಹೇಳಿದ, “ಜಂಗ್ಲಿ” ನೋಡುವ ಮಾರೆ.. ಒಳ್ಳೆ ಉಂಟು..” ಮತ್ತೆ “ದೂಸ್ರಾ ಮಾತಿಲ್ಲ”! ಸೀದಾ ಹೊರಟೆವು, ರಾಮಕಾಂತಿ ಚಿತ್ರಮಂದಿರಕ್ಕೆ. ವಿಶೇಷವೇನೆಂದರೆ, ಅಲ್ಲಿ ಹಿಂದೆ ಯಾವ ಚಿತ್ರಕ್ಕೆ ಹೋಗಿದ್ದೆ ಅನ್ನೋದೇ ನೆನಪಿಲ್ಲ! ಮಿತ್ರನು ಅಲ್ಲಿ “ಜೋಗಿ” ನೋಡಿದ್ದ. ಅಲ್ಲಿ ತುಂಬಾ ವರ್ಷಗಳ ಹಿಂದೆ “ಮೈನೆ ಪ್ಯಾರ್ ಕಿಯಾ” ನೋಡಿದ್ದ ನೆನಪು… ಮತ್ತೆ ಹೋಗಿದ್ದೆನು, ಆದ್ರೆ, ಚಿತ್ರ ಯಾವುದೆಂದು ಹೊಳೀತಿಲ್ಲ. ಬಿಡಿ, ಯಾಕೆ ಹಳೇ ಮಾತು… ಜಂಗ್ಲಿ ನೋಡಿ ಖುಷಿಯಾಯ್ತು! ಒಂಥರಾ ಭಿನ್ನ ಶೈಲಿಯಲ್ಲಿತ್ತು ಅದರ ಚಿತ್ರಕಥೆ, screenplay. ಛಾಯಾಗ್ರಹಣವಂತೂ ಸೂಪರ್! ಶುರುವಿನಿಂದ ಕಡೆಯವರೆಗೂ! ಕೆ.ಆರ್.ಪುರಮ್ ಕೇಬಲ್ ಸೇತುವೆಯ ಬಳಿ ಶುರುವಾದ “ಜಂಗ್ಲಿ” ಕೊನೆಯವರೆಗೂ ನೋಡಿಸಿಕೊಂಡು ಹೋಯಿತು. ಎಲ್ಲೂ “ಬೋರ್” ಆಗ್ಲಿಲ್ಲ. ಸೊಗಸಾದ ಹಾಡುಗಳು, (ಕಂಗ್ಲಿಷ್ ಆದ್ರೂ ಚೆನ್ನಾಗಿತ್ತು!) ಇನ್ನೂ ಸೊಗಸಾದ ಚಿತ್ರೀಕರಣ, ಛಾಯಾಗ್ರಹಣ… ಉಳಿದ ತಾಂತ್ರಿಕತೆಗಳು! ರಾಮಕಾಂತಿಯ ದೊಡ್ಡ, ಅಗಲ ಪರದೆಯಮೇಲೆ, ಸುತ್ತುವರಿ ಧ್ವನಿ ವಿಶೇಷಗಳ ನಡುವೆ “ಜಂಗ್ಲಿ” ಮಿಂಚಿತು. ಕಥೆಯೇನೂ ವಿಶೇಷವಿಲ್ಲದಿದ್ದರೂ, ಅದನ್ನು ಸಾಗಿಸಿದ ರೀತಿ ಖುಷಿ ತಂದಿತು. ಎಲ್ಲರ ಅಭಿನಯವೂ ಚೆನ್ನಾಗಿತ್ತು. ವಿಶೇಷವಾಗಿ, ರಂಗಾಯಣ ರಘು-ವಿಜಯ್ ಅವರದು. ಹೆಚ್ಚೇನೂ ಇಲ್ಲ ಚಿತ್ರದಲ್ಲಿ, ಮಸಾಲಾ ಮನೋರಂಜನೆ. ಆದರೆ, ಒಮ್ಮೆ ನೋಡಿ ಆನಂದಿಸಬಹುದು…

    ಚಿತ್ರಗಳ ಕಥೆ ಹೇಳಿ ಮೋಜು ಹಾಳು ಮಾಡಲು ಹೋಗಲ್ಲ! ನೀವೇ ನೋಡಿ. ನಮಗಿಷ್ಟವಾದುದು ನಿಮಗೆ ಆಗದೆಯೂ ಇರಬಹುದು. ಇಷ್ಟವಾಗದು ನಿಮಗೆ ಇಷ್ಟವಾಗಲೂ ಬಹುದು… ಅಂದ ಹಾಗೆ, ಸಂಜೆ ಷೋ, “ಸಂಕಟ”ವಾಗಿ, ರಾತ್ರಿ ಷೋ “ಜಂಗ್ಲಿ”ಯಾಯ್ತು. ಮೂರನೇ ಚಿತ್ರ ಅಂದೇ ನೋಡಿ ನಮ್ಮ ದಾಖಲೆ ಮುರಿಯಲಾಗಲಿಲ್ಲ…


ಪ್ರಲೇಖ(Pralekha)

©2009 Pradeep Hegde. All rights reserved.

ಭಾಷಾ ಕಲಬೆರಕೆ ಅಳೆಯುವ ಸೂತ್ರ

ಭಾಷಾ ಕಲಬೆರಕೆ ಅಳೆಯುವ ಸೂತ್ರ

ಭಾಷಾ ಕಲಬೆರಕೆ ಅಳೆಯುವ ಸೂತ್ರ

::ನಿಮ್ಮ ಭಾಷಾ ಕಲಬೆರಕೆಯನ್ನು ಅಳೆಯಲೊಂದು ಸೂತ್ರ!
::ಕನ್ನಡ ಕಲಬೆರಕೆ ಅಳೆಯುವ ಸೂತ್ರ::

::ಕನ್ನಡದ ಪ್ರತಿ ವಾಕ್ಯದ ಭಾಷಾ ಕಲಬೆರಕೆ
= (ಕನ್ನಡ ವಾಕ್ಯವೊಂದರಲ್ಲಿನ ಪರಭಾಷಾ ಪದಗಳ ಸಂಖ್ಯೆ) / (ಆ ವಾಕ್ಯದಲ್ಲಿನ ಒಟ್ಟು ಪದಗಳ ಸಂಖ್ಯೆ)


ಇದು, ನಿಮ್ಮ ಒಂದು ವಾಕ್ಯದಲ್ಲಿ ಎಷ್ಟರ ಮಟ್ಟಿಗೆ ಕಲಬೆರಕೆಯಾಗಿದೆಯೆಂದು ತಿಳಿಸುತ್ತದೆ.


::ಶೇಕಡಾವಾರು ಕನ್ನಡದ ಪ್ರತಿ ವಾಕ್ಯದ ಭಾಷಾ ಕಲಬೆರಕೆ
= [ (ವಾಕ್ಯವೊಂದರಲ್ಲಿನ ಪರಭಾಷಾ ಪದಗಳ ಸಂಖ್ಯೆ) / (ಆ ವಾಕ್ಯದಲ್ಲಿನ ಒಟ್ಟು ಪದಗಳ ಸಂಖ್ಯೆ)  ] X 100  %

::ಭಾಷಾ ಕಲಬೆರಕೆ ಅಳೆಯುವ ಸಾಮಾನ್ಯ ಸೂತ್ರ::

ಪ್ರತಿ ವಾಕ್ಯದ ಭಾಷಾ ಕಲಬೆರಕೆ = (ವಾಕ್ಯವೊಂದರಲ್ಲಿನ ಪರಭಾಷಾ ಪದಗಳ ಸಂಖ್ಯೆ) / (ಆ ವಾಕ್ಯದಲ್ಲಿನ ಒಟ್ಟು ಪದಗಳ ಸಂಖ್ಯೆ)

ಶೇಕಡಾವಾರು ಪ್ರತಿ ವಾಕ್ಯದ ಭಾಷಾ ಕಲಬೆರಕೆ
= [ (ವಾಕ್ಯವೊಂದರಲ್ಲಿನ ಪರಭಾಷಾ ಪದಗಳ ಸಂಖ್ಯೆ) / (ಆ ವಾಕ್ಯದಲ್ಲಿನ ಒಟ್ಟು ಪದಗಳ ಸಂಖ್ಯೆ)  ] X 100  %

:: General Formula To Measure The Language Adulteration ::
Language Adulteration (per sentence)
= (The number of foreign language words in the sentence) / (Total number of words in that sentence)

Language Adulteration Percentage(per sentence)
= [ (The number of foreign language words in the sentence) / (Total number of words in that sentence) ] X 100  %

»ಪ್ರಲೇಖ

©Copyright Pradeep Hegde. All rights reserved.

ಚಿತ್ರಕೃಪೆ: Ciencias sociais.svg By Ciências_sociais.png: *Nuvola_apps_edu_miscellaneous.svg: David Vignoni, traced User:StanneredNuvola_apps_edu_languages.svg: Traced by User:Stannered, original by David VignoniNuvola_apps_kuser.svg: David Vignoni, User:Stanneredderivative work: Timeu (talk)Nuvola_apps_edu_miscellaneous.svg: David Vignoni, traced User:StanneredNuvola_apps_edu_languages.svg: Traced by User:Stannered, original by David VignoniNuvola_apps_kuser.svg: David Vignoni, User:StanneredNuvola_apps_bookcase_simplified.svg: *Nuvola_apps_bookcase.svg: Peter Kempderivative work: Hguiney (talk)derivative work: MZaplotnik [LGPL], via Wikimedia Commons